ಭಾಷಾಂತರ ಕಲೆ

	ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಒಂದು ಹಂತದ ಇಲ್ಲವೇ ಕಾಲದ ಭಾಷೆಯಿಂದ ಇನ್ನೊಂದು ಹಂತದ ಇಲ್ಲವೇ ಕಾಲದ ಅದೇ ಭಾಷೆಗೆ ಮಾನಸಿಕವಾಗಿ, ಮೌಖಿಕವಾಗಿ ಅಥವಾ ಬರೆಹ ರೂಪದಲ್ಲಿ ಮೂಲದ ಅರ್ಥಭಾವಗಳನ್ನು ಕೊಂಡೊಯ್ಯುವ ಕ್ರಿಯೆ. ಪ್ರಕ್ರಿಯೆ ಅಥವಾ ಪ್ರಕ್ರಿಯೆಯ ಫಲ (ಆರ್ಟ್ ಆರ್ಫ ಟ್ರಾನ್‍ಸ್ಲೇಷನ್) ಭಾಷಾಂತರ ಎಂಬುದು ಭಾಷೆಯ ಇಲ್ಲವೆ ಭಷೆಯ ಹಂತದ ಅಂತರ ಏರ್ಪಟ್ಟಿರುತ್ತದೆ ಎಂಬುದು ಅಥವಾ ಅಂತರವನ್ನು ಏರ್ಪಡಿಸುವ ಪ್ರಕ್ರಿಯೆಯನ್ನು ಇಲ್ಲವೇ ಅಂಥ ಪ್ರಕ್ರಿಯೆಯ ಫಲವನ್ನು ಸೂಚಿಸುತ್ತದೆ. ಹೀಗಾಗಿ ಭಾಷಾಂತರ ಸಾಮಾನ್ಯವಾಗಿ ಎರಡು ಭಾಷೆಗಳ ನಡುವೆ ಮತ್ತು ವಿಶೇಷ ಸಂದರ್ಭಗಳಲ್ಲಿ ಭಾಷೆಯ ಎರಡು ಹಂತಗಳಲ್ಲಿ ನಡೆಯುವ ಕಾರ್ಯ.

		ಪ್ರಸಕ್ತ ಲೇಖನವನ್ನು ಈ ಮುಂದಿನ ಶೀರ್ಷಿಕೆಗಳ ಅಡಿಯಲ್ಲಿ ಬಿತ್ತರಿಸಿದೆ:
1 ಭಾಷಾಂತರ ಮತ್ತು ಲಿಪ್ಯಂತರ
2 ಪರಿಭಾಷೆ
3 ಕಲೆಯೇ ವಿಜ್ಞಾನವೇ?
4 ಅಗತ್ಯ ಮತ್ತು ಪ್ರಯೋಜನಗಳು
5 ಆದರ್ಶ ಭಾಷಾಂತರಕಾರನ ಅರ್ಹತೆಗಳು ಮತ್ತು ಆದರ್ಶ ಭಾಷಾಂತರದ ಲಕ್ಷಣಗಳು
6 ತತ್ತ್ವಗಳು
7 ಪ್ರಕಾರಗಳು
8 ಸಮಸ್ಯೆಗಳು
9 ರಚನೆಗಳು
10 ಆಂತರಿಕ ಸಮಸ್ಯೆಗಳು
11 ಕಾವ್ಯಾನುವಾದದ ವಿಶಿಷ್ಟ ಸಮಸ್ಯೆಗಳು
12 ವಿಜ್ಞಾನ, ಮಾನವಿಕ ಮತ್ತು ತಾಂತ್ರಿಕ ಕೃತಿಗಳ ಭಾಷಾಂತರ
13 ಯಂತ್ರಾನುವಾದ

	1 ಭಾಷಾಂತರ ಮತ್ತು ಲಿಪ್ಯಂತರ: ಮೂಲ ಭಾಷೆಯ (ಅಂದರೆ ಯಾವ, ಭಾಷೆಯಿಂದ ಭಾಷಾಂತರ ಮಾಡುತ್ತೇವೆಯೋ ಆ ಭಾಷೆಯ) ಧ್ವನಿಸಂಕೇತಗಳಿಗೆ ಉದ್ದಿಷ್ಟ ಭಾಷೆಯ (ಅಂದರೆ ಯಾವ ಭಾಷೆಗೆ ಭಾಷಾಂತರ ಮಾಡುತ್ತೇವೆಯೋ ಆ ಭಾಷೆಯ) ಧ್ವನಿಸಂಕೇತಗಳನ್ನು ಅಳವಡಿಸುವುದಕ್ಕೆ ಲಿಪ್ಯಂತರ ಎಂದು ಹೆಸರು ಇದು ಭಾಷಾಂತರ ಅಲ್ಲ. ಒಂದೆ ಭಾಷೆಯ ಅವಸ್ಥಾಂತರಗಳಲ್ಲಿ-ಅಂದರೆ ಹಿಂದಿನ ಕಾಲದ ಭಾಷೆಯಿಂದು ಇಂದಿನ ಭಾಷೆಗೆ-ನಡೆಯುವ ಭಾಷಾಂತರದಲ್ಲಿ ಲಿಪ್ಯಂತರದ ಪ್ರಶ್ನೆ ಉದ್ಭವಿಸುವುದೆ ಇಲ್ಲ. ಒಂದೆ ಲಿಪಿ ಬಳಸುವ ವಿವಿಧ ಭಾಷೆಗಳ ನಡುವೆ, ಉದಾಹರಣೆಗೆ ರೋಮನ್‍ಲಿಪಿ ಬಳಸುವ ಇಂಗ್ಲಿಷ್ ಮತ್ತು ಫ್ರೆಂಚ್ ಅಥವಾ ದೇವನಾಗರಿ ಲಿಪಿ ಬಳಸುವ ಸಂಸ್ಕøತ ಮತ್ತು ಹಿಂದಿ ಅಥವಾ ಹಿಂದಿ ಮತ್ತು ಮರಾಠಿಯಂಥ ಭಾಷೆಗಳ ನಡುವೆ, ನಡೆಯುವ ಅನುವಾದವೂ ಈ ಮಾತನ್ನು ದೃಢಪಡಿಸುತ್ತದೆ.

	2 ಪರಿಭಾಷೆ : ಭಾಷಾಂತರ ಎಂಬ ಶಬ್ದಕ್ಕೆ ಆಧಾರವಾಗಿರುವ ಟ್ರಾನ್-ಸ್ಲೇಶನ್ ಎಂಬುದಕ್ಕೆ 'ಚಪ್ಪಲಿ ರಿಪೇರಿ ಮಾಡುವುದು ಎಂಬುದರಿಂದ ಹಿಡಿದು 'ಸಜೀವ ಸ್ವರ್ಗಾರೋಹಣ' ಎಂಬುದರವರೆಗೆ ಅನೇಕ ಅರ್ಥಗಳಿವೆ. ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವುದು ಎಂಬುದು ಇದರ ಶಾಬ್ದಿಕ ಅರ್ಥ. ಧಾರ್ಮಿಕಕ್ಷೇತ್ರದಲ್ಲಿ ಒಂದು ಪೀಠದಿಂದ ಇನ್ನೊಂದು ಪೀಠಕ್ಕೆ ಧರ್ಮಾಧಿಕಾರಿಯನ್ನು ವರ್ಗಾಯಿಸುವುದು ಹಗೂ ಸಂತನ ಅಸ್ಥಿಯನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಒಯ್ಯುವುದು ಎಂಬ ಅರ್ಥವಿದ್ದು ಸಾಹಿತ್ಯಕ್ಷೇತ್ರದಲ್ಲಿ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಒಯ್ಯುವ ಕಾರ್ಯವನ್ನು ಈ ಶಬ್ದವೇ ಸೂಚಿಸತೊಡಗಿತು.

	ಇಂಗ್ಲಿಷ್ ಭಾಷೆಯ ಮೊತ್ತಮೊದಲ ನಿಘಂಟನ್ನು ರಚಿಸಿದ ಜಾನ್ಸನ್ `ಅರ್ಥವನ್ನು ಕಾಯ್ದುಕೊಂಡು ಇನ್ನೊಂದು ಭಾಷೆಗೆ ಬದಲಾಯಿಸುವುದನ್ನು 'ಭಾಷಾಂತರವೆಂದು ಪರಿಗಣಿಸಿದ. ಇಲ್ಲಿ ಅರ್ಥವನ್ನು ಎಷ್ಟರಮಟ್ಟಿಗೆ ಕಾಯ್ದುಕೊಳ್ಳಬಹುದು ಎಂಬ ಪ್ರಶ್ನೆ ಏಳುತ್ತದೆ. ಭಾಷೆಗಳ ನಡುವಣ ಪಾರಸ್ಪರಿಕ ವ್ಯತ್ಯಾಸಗಳಿಂದಾಗಿ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅರ್ಥವನ್ನು ಸಂಪೂರ್ಣವಾಗಿ ಒಯ್ಯುವುದು ಸಾಧ್ಯವಾಗುವುದಿಲ್ಲವೆಂಬುದು ಎಲ್ಲ ಭಾಷಾಂತರಕಾರರ ಅನುಭವ. ಪರಿಭಾಷೆಯ ಈ ಕೊರತೆಯನ್ನು ಗಮನಿಸಿಯೆ ಎ.ಎಲ್, ಸ್ಮಿತ್ 'ಅರ್ಥವನ್ನು ಎಷ್ಟರಮಟ್ಟಿಗೆ ಸಾಧ್ಯವೊ ಅಷ್ಟರಮಟ್ಟಿಗೆ ಉಳಿಸಿಕೊಂಡು ಇನ್ನೊಂದು ಭಾಷೆಗೆ ಬದಲಾಯಿಸುವುದೇ ಭಾಷಾಂತರ ಎಂದು ಜಾನ್ಸನ್ನನ ಪರಿಭಾಷೆಯನ್ನು ಪರಿಷ್ಕರಿಸಿದ. ಇದಕ್ಕೆ ಆತ ಕೊಟ್ಟ ಕಾರಣ ಹೀಗಿದೆ: 'ಬಹುತೇಕವಾಗಿ ಮೂಲದ ಪರಿಣಾಮದ ಅಲ್ಪಾಂಶವಾದರೂ ಭಾಷಾಂತರದಲ್ಲಿ ನಷ್ಟವಾಗಿಯೇ ತೀರುತ್ತದೆ.'

	ಭಾಷಾಂತರದ ಬಗೆಗಿನ ಅನೇಕ ವಿಚಾರಗಳ ಬಗ್ಗೆ ಅಧಿಕಾರವಾಣಿ ಎಂಬುದಾಗಿ ಭಾವಿಸಲಾಗಿರುವ ಪೋಸ್ಟ್‍ಗೇಟನ ಪರಿಭಾಷೆ ಹೀಗಿದೆ: ಭಾಷಾಂತರ ಎಂಬುದು ಮೊದಲಿಗೇ ಈ ಸಂಗತಿಗಳನ್ನು ಸ್ಪಷ್ಟಪಡಿಸಬೇಕು. (i) ಮೂಲದಲ್ಲಿ ಬಳಸಿರುವ ಅರ್ಥದಲ್ಲಿಯೇ ಪ್ರತಿಯೊಂದು ಶಬ್ದದ ಅರ್ಥವನ್ನೂ ಭಾಷಾಂತರಕಾರ ಗ್ರಹಿಸಿದ್ದಾನೆ; (ii) ತನ್ನ ಭಾಷೆಯ ಜಾಯಮಾನ ಅವಕಾಶ ಮಾಡಿಕೊಡುವಷ್ಟರ ಮಟ್ಟಿಗೆ ಅತ್ಯಂತ ಹತ್ತಿರದ ಪರ್ಯಾಯದ ಮೂಲಕ ಅದನ್ನು ವರ್ಗಾಯಿಸಿದ್ದಾನೆ ಹಾಗೂ ಈ ಇಡೀ ವರ್ಗಾವಣೆ ಮೂಲಕ ಯಥಾವತ್ತಾದ ಪ್ರತಿರೂಪವಾಗುವಂತೆ ಹಾಗೂ ಪದವಿನ್ಯಾಸದಲ್ಲಿ ಮೂಲದಷ್ಟೇ ಎಚ್ಚರವನ್ನೂ ಶೈಲಿಯಲ್ಲಿ ಮೂಲದಷ್ಟೇ ಲಾಲಿತ್ಯವ್ನನೂ ಮೆರೆಯುವಂತೆ ಆ ಪರ್ಯಾಯಗಳನ್ನು ಜೋಡಿಸಿ ಬೆಸೆದುಮಾಡಿದ್ದಾನೆ. ಉತ್ತಮ ಬರೆಹದ ಲಕ್ಷಣಗಳೆಲ್ಲ ಉತ್ತಮ ಭಾಷಾಂತರದಲ್ಲಿಯೂ ಮೈದಳೆದಿರಬೆರಬೇಕೆಂಬುದು ಈ ಪರಿಭಾಷೆಯ ಆಶಯ.

	ನಿಜವಾದ ಭಾಷಾಂತರ ಪರಕಾಯ ಪ್ರವೇಶವಿದ್ದಂತೆ ಎಂಬ ವಿಲಮೋವಿಟ್ಜನ ಹೇಳಿಕೆ ಮೂಲ ಲೇಖಕನ ಮತ್ತು ಭಾಷಾಂತರಕಾರನ ನಡುವೆ ಏರ್ಪಡಬೇಕಾದ ತಾದಾತ್ಮ್ಯವನ್ನು ಸೂತ್ರೀಕರಿಸುತ್ತದೆ.

	ಮಾಲ್ಕಮ್ ಕೌಲೆಯ ಪ್ರಕಾರ ಭಿನ್ನ ಹಿನ್ನೆಲೆಯ ಓದುಗರಿಗಾಗಿ ಬೇರೊಂದು ಭಾಷೆಯಲ್ಲಿ ಕೃತಿಯನ್ನು ಪುನಸ್ಸøಷ್ಟಿಸುವ ಕಲೆಯೇ ಭಾಷಾಂತರ. ಭಾಷಾಂತರಕ್ಕೆ ಈ ಪರಿಭಾಷೆ ಕಲೆಯ ಉತ್ಕøಷ್ಟಸ್ಥಾನ ಕಲ್ಪಸಿದೆ. ಮೂಲಕೃತಿಯ್ನನು ಸೃಷ್ಟಿ ಎಂದು ಕರೆಯುವುದಾದಲ್ಲಿ ಭಾಷಾಂತರವನ್ನು ಪುನಸ್ಸøಷ್ಟಿ ಎಂದು ಕರೆಯುವುದು ಉಚಿತ. ಅಂಥ ಪುನಸ್ಸøಷ್ಟಿ ಆದಾಗಲೇ ಅದು ಕಲೆಯ ಪಟ್ಟಕ್ಕೆ ಅಧಿಕಾರಿಯಾಗುವುದು. ಎಸ್.ವಿ ರಘುನಾಥರಾವ್ ಅವರೂ ಭಾಷಾಂತರವನ್ನು ಕಲಾತ್ಮಕ 'ಭಾಷಾಂತರ ಪ್ರಜ್ಞಾಪೂರ್ವಕ ಕಲೆ ಮೌಲಿಕ ಸಾಹಿತ್ಯ ಸೃಷ್ಟಿಯಲ್ಲಿ ತೊಡಗಿರುವ ವ್ಯಕ್ತಿ ಆವೇಶಪರವಾಗಿ ಅಥವಾ ಮೈಮರೆತು ತನ್ನ ಸೃಷ್ಟಿಕಾರ್ಯವನ್ನು ನಿರ್ವಹಿಸಿರಬಹುದಾದರೂ ಭಾಷಾಂತರಕಾರ ಕ್ಷಣಮಾತ್ರವೂ ಎಚ್ಚರ ತಪ್ಪುವಂತಿಲ್ಲ. ಅರ್ಥಗ್ರಹಣದಲ್ಲಿ ಮತ್ತು ಸದೃಶ ಅಭಿವ್ಯಕ್ತಿ ಸಾಧಿಸುವಲ್ಲಿ ಭಾಷಾಂತರಕಾರನ ಪ್ರತಿಭೆ, ವ್ಯುತ್ಪತ್ತಿ, ವೈದುಷ್ಯ ಎಲ್ಲ ಸದಾ ಜಾಗೃತವಾಗಿರಬೇಕು. ಇಲ್ಲವಾದಲ್ಲಿ ಪ್ರಮಾದ ಸಂಭವಿಸುತ್ತದೆ. ಮೂಲಕ ದ್ರೋಹಮಾಡಿದಂತಾಗುತ್ತದೆ.

	ಭಾಷಾಂತರ ಇಂದು ತೌಲನಿಕ, ವಿವರಣಾತ್ಮಕ ಮತ್ತು ಆನ್ವಯಿಕ ಭಾಷಾವಿಜ್ಞಾನದ ಅಂಗ, ಕ್ಯಾಟ್‍ಫೋರ್ಡ್ ಎಂಬ ಭಾಷಾವಿಜ್ಞಾನಿಯ ಪ್ರಕಾರ ' ಒಂದು ಭಾಷೆಯಲ್ಲಿಯ ಪಠ್ಯವಸ್ತುಗೆ ಬದಲು ಇನ್ನೊಂದು ಭಾಷೆಯ ಸಮಾನ ಪಠ್ಯವಸ್ತುವನ್ನು ಹಾಕುವ ಪ್ರಕ್ರಿಯೆಯೇ ಭಾಷಾಂತರ.' ಇತರ ಭಾಷಾವಿಜ್ಞಾನಿಗಳು ರೂಪಸಾಮ್ಯ, ರಚನಾಸಾಮ್ಯ ಮತ್ತು ಅರ್ಥಸಾಮ್ಯ ಸಾಧಿತವಾಗಿರುವಲ್ಲಿ ತೃಪ್ತಿಕರ ಭಾಷಾಂತರ ಲಭ್ಯವಾಗಿರುತ್ತದೆಂದು ಭಾವಿಸುತ್ತಾರೆ.

	ಒಟ್ಟಿನಲ್ಲಿ ಇಷ್ಟು ಹೇಳಬಹುದು: ಭಾಷೆ ದೇಹ ಅಥವಾ ಶರೀರವಿದ್ದಂತೆ; ವಸ್ತು ಆತ್ಮವಿದ್ದಂತೆ. ಆತ್ಮಕ್ಕೆ ಭಂಗಬಾರದಂತೆ ದೇಹಾಂತರ ಕಾರ್ಯನಡೆಸುವುದೇ ಭಾಷಾಂತರದ ಉದ್ದೇಶ. ಮೂಲ ಲೇಖಕನದು ಸೃಷ್ಟಿ ಕಾರ್ಯವಾದರೆ, ಭಾಷಾಂತರಕಾರನದು ಅನುಸೃಷ್ಟಿಕಾರ್ಯ. ಎಂದೇ ಮೂಲ ಸೃಷ್ಟಿ ಭಾಷಾಂತರ ಅನುಸೃಷ್ಟಿ.

	3 ಕಲೆಯೇ ವಿಜ್ಞಾನವೇ?: ಪ್ರತಿಭೆ ವಿದ್ವತ್ತು ಶ್ರಮ ಮತ್ತು ಅನುಭವಗಳ ಸಂಗಮದಿಂದ ಮೈದಳೆಯುವ ಅನುಸೃಷ್ಟಿಯಾಗಿರುವ ಭಾಷಾಂತರ 'ಕಲೆ ಶಬ್ದಕ್ಕಿರುವ ಮೂಲ ಅರ್ಥದ ದೃಷ್ಟಿಯಿಂದ ಅಂದರೆ, ಅಧ್ಯಯನದ ಮೂಲಕ (ಕಲೌ ಅಭ್ಯಾಸೇ) ಹಾಗೂ ಪರಿಶ್ರಮಪೂರ್ವಕವಾಗಿ ಕರಗತವಾಗಬೇಕಾಗಿರುವ ವಿದ್ಯೆ ಎಂಬ ಅರ್ಥದಲ್ಲಿ ಕಲೆ ಎಂಬ ಹೆಸರಿಗೆ ಅರ್ಹವಾಗಿರುತ್ತದೆ.

	ವಿಜ್ಞಾನ ಎಂಬ ಶಬ್ದದ ಮೂಲ ಅರ್ಥದ ದೃಷ್ಟಿಯಿಂದ ನೋಡಿದರೆ ಭಾಷಾಂತರ ಇಂದು ವಿಶಿಷ್ಟ ವ್ಯವಸ್ಥಿತ ಮತ್ತು ಕ್ರಮಬದ್ದ ವಿದ್ಯೆ ಅಥವಾ ಜ್ಞಾನವಾಗಿರುವುದರಿಂದ ವಿಜ್ಞಾನ ಎಂಬ ಪದವಿಗೂ ಅಧಿಕಾರಿಯಾಗುತ್ತದೆ. ಭಾಷಾಂತರವೂ ಕೆಲವೊಂದು ಸಾರ್ವತ್ರಿಕ ಸತ್ಯಗಳನ್ನು ಉದ್ಘೋಷಿಸುತ್ತದೆ. ಸಾರ್ವತ್ರಿಕವಾಗಿರುವ ಕೆಲವು ನಿಯಮಗಳು ಎಷ್ಟರಮಟ್ಟಿಗೆ ಭಾಷಾಂತರವೊಂದರಲ್ಲಿ ಅನ್ವಯವಾಗಿವೆ ಎಂಬುದನ್ನು ಪರಿಶೀಲಿಸುವುದಕ್ಕೂ ಅವಕಾಶ ಮಾಡಿಕೊಡುತ್ತದೆ. ಇಂದಿನ ವ್ಯಾಪಕಾರ್ಥದಲ್ಲಿ ಪರಿಶೀಲಿಸಿದರೂ ಭಾಷಾಂತರ ಕೆಲವಾದರೂ ಸೈದ್ಧಾಂತಿಕ ತತ್ತ್ವಗಳನ್ನು ಉದಾಹರಣೆಗೆ ವಿಧೇಯತಾ ತತ್ತ್ವ ಆನಂದತತ್ತ್ವ. ಮೂಲಾಭಾಸತ್ವ ಅನುರೂಪತಾತತ್ತ್ವ ಮತ್ತು ಪರಿಹಾರತತ್ತ್ವಗಳನ್ನು ಒಳಗೊಂಡಿದೆ ಎಂಬುದೂ ಉತ್ತಮ ಭಾಷಾಂತರ ಲಭ್ಯವಾಗಬೇಕಾದರೆ ಈ ತತ್ತ್ವಗಳ ಪರಿಜ್ಞಾನ ಮತ್ತು ಇವುಗಳ ಪ್ರಜ್ಞಾಪೂರ್ವಕ ಹಾಗೂ ವಿವೇಚನಾತ್ಮಕ ಅನ್ವಯ ಅಗತ್ಯವಾಗುತ್ತದೆ ಎಬುದೂ ಅರಿವಿಗೆ ಬರುತ್ತದೆ. ಹೀಗಾಗಿ ವಿಜ್ಞಾನ ಎನ್ನಿಸಿಕೊಳ್ಳಲು ಅಗತ್ಯವಾದ ಅರ್ಹತೆಗಳೆಲ್ಲ ಭಾಷಾಂತರಕ್ಕಿವೆ ಎಂಬುದು ಸ್ಪಷ್ಟ ಪರಿಭಾಷೆ, ಲಕ್ಷಣ ಮತ್ತು ಅನ್ವಯಿಕತೆಗಳ ದೃಷ್ಟಿಯಿರಿದ ಮಾತ್ರವೇ ಭಾಷಾಂತರ ವಿಜ್ಞಾನವೆಂದು ಕರೆಯಬೇಕಾಗಿಲ್ಲ, ಭಾಷಾಂತರ ಇಂದು ಭಾಷಾವಿಜ್ಞಾನದ ವಿಶಿಷ್ಟ ಶಾಖೆ ಆಗಿದೆ. ವೈಜ್ಞಾನಿಕ ವಿಶ್ಲೇಷಣೆಗೆ ಅದನ್ನು ಒಳಪಡಿಸಲಾಗಿದೆ. ಅದರ ಆಧಾರಭೂತ ತತ್ತ್ವಗಳನ್ನು ವೈಜ್ಞಾನಿಕವಾಗಿ ವಿವರಿಸಲಾಗಿದೆ. ವಿಶ್ಲೇಷಿಸಲಾಗಿದೆ. ಗಣಕ ಯಂತ್ರಗಳಿಂದ ಭಾಷಾಂತರವನ್ನು ಸಿದ್ದಪಡಿಸುವಲ್ಲಿಯ ವರೆಗೂ ಈ ಕ್ಷೇತ್ರದಲ್ಲಿ ವ್ಯವಸ್ಥಿತ ಅಧ್ಯಯನ ಮತ್ತು ಸಂಶೋಧನೆಗಳ ನಡೆಯುತ್ತಿವೆ. ಇಂದು ಇದು ಭಾಷಾವಿಜ್ಞಾನಿಗಳ ಮತ್ತು ತಂತ್ರವಿದರ ವಿಶೇಷ ಅಧ್ಯಯನ ಕ್ಷೇತ್ರವಾಗಿ ಬೆಳೆಯುತ್ತಿದೆ.

	ಕಲೆ ಮತ್ತು ವಿಜ್ಞಾನದ ವೈಶಿಷ್ಟ್ಯಗಳು ಭಾಷಾಂತರದ ಕ್ಷೇತ್ರದಲ್ಲಿ ಅಪೂರ್ವ ರೀತಿಯಲ್ಲಿ ಸಂಗಮಿಸಿರುವುದನ್ನು ಕಂಡಾಗ ಇದನ್ನು ಕೇವಲ ಕಲೆ ಅಥವಾ ವಿಜ್ಞಾನ ಎಂದು ಕರೆಯುವುದರ ಬದಲು ವಿಜ್ಞಾನಾತ್ಮಕ ಕಲೆ ಎಂದೋ ಅತ್ಯಂತ ವೈಜ್ಞಾನಿಕವಾಗಿ ಕಾರ್ಯನಿರ್ವಹಿಸುವಾಗಲೂ ಕಲೆಯ ಸಂಪರ್ಕದಿಂದ ದೂರ ಉಳಿಯದ ಈ ವಿಜ್ಞಾನವನ್ನು ಕಲಾತ್ಮಕ ವಿಜ್ಞಾನವೆಂದೋ ಕರೆಯುವುದು ಉಚಿತ.

	4 ಅಗತ್ಯ ಮತ್ತು ಪ್ರಯೋಜನಗಳು: ಆಧುನಿಕ ಪ್ರಪಂಚದಲ್ಲಿ ಭಾಷಾಂತರ ಅನಿವಾರ್ಯ ಚಟುವಟಿಕೆ, ವಿವಿಧ ಬಾಷೆಗಳಲ್ಲಿ ಮಾನವ ಸಮುದಾಯಕ್ಕೆ ಸಾಮಾನ್ಯವಾಗಿರುವಂಥ ಅನುಭವಗಳನ್ನೊಳಗೊಂಡಿರುವ ವಾಙ್ಮಯ ದೇಶಕಾಲಗಳ ಮೇರೆ ಮೀರಿ ಸಮಸ್ತ ಮಾನವ ಜನಾಂಗಕ್ಕೆ ಉಪಯುಕ್ತವಾಗಿ ಪರಿಣವಿಸಬೇಕಾದರೆ ಭಾಷಾಂತರವನ್ನು ಆಶ್ರಯಿಸಲೇಬೇಕಾಗುತ್ತದೆ. ಸಾಂಸ್ಕøತಿಕವಾಗಿ, ವಾಣಿಜ್ಯಾತ್ಮಕವಾಗಿ ಮತ್ತು ರಾಜಕೀಯವಾಗಿ ಪ್ರಪಂಚದ ವಿವಿಧ ರಾಷ್ಟ್ರಗಳು ಹತ್ತಿರ ಬರುತ್ತಿರುವ ಈ ದಿನಗಳಲ್ಲಿ ಜ್ಞಾನದ ಸಮಸ್ತ ರಂಗಗಳಲ್ಲಿಯೂ ಅಭಿಪ್ರಾಯ ವಿನಿಮಯ ಸತತವಾಗಿ ನಡೆಯುತ್ತಿದೆ. ಈ ಕಾರ್ಯ ಭಾಷಾಂತರದಿಂದ ಮಾತ್ರ ಸಾಧ್ಯವಾಗುತ್ತದೆ. ಹೋಮರನ ಕೃತಿಗಳ ಭಾಷಾಂತರದ ಸಂದರ್ಭದಲ್ಲಿ ಭಾಷಾಂತರಕಾರನೊಬ್ಬ ಬಳಸಿದ ಛಂದಸ್ಸು ಇಂಗ್ಲಿಷ್ ಕಾವ್ಯ ಕ್ಷೇತ್ರದಲ್ಲಿ ಹೊಸ ಆಯಾಮಗಳನ್ನೇ ತೆರೆಯಿತೆಂದು ಹೇಳಲಾಗಿದೆ. ಬಿ.ಎಂ. ಶ್ರೀಕಂಠಯ್ಯನವರ 'ಇಂಗ್ಲಿಷ್ ಗೀತೆಗಳು ಕನ್ನಡ ಕಾವ್ಯಕ್ಷೇತ್ರದಲ್ಲಿ ಕಾಂತಿಕಾರಿ ಬೆಳೆವಣಿಗೆಗೆ ನಾಂದಿ ಹಾಡಿತೆಂಬುದು ಸ್ಪಷ್ಟ. ಹೊಸ ಅಗತ್ಯಗಳಿಗೆ ಅನುಗುಣವಾಗಿ ಭಾಷೆ ಸ್ಪಂದಿಸುವ ಅವಕಾಶವೂ ಇದರಿಂದ ದೊರೆಯುತ್ತದೆ. ಡಿವಿಜಿಯವರ ಮಾತಿನಲ್ಲಿ ಸ್ವತಂತ್ರ ಕಾವ್ಯದ ಪೈರು ಹುಟ್ಟುವುದಕ್ಕೆ ಮೊದಲು ನಡೆದಿರಬೇಕಾದ ಉಳುಮೆಯ ಕೆಲಸವೇ ತರ್ಜುಮೆ, ಭಾಷಾಂತರವಿಲ್ಲದೆ ಯಾವ ಚಟುವಟಿಕೆಯೂ ಮುನ್ನಡೆಯಲಾರದು. ಎಂಬ ಇ.ಎಸ್, ಚೀಟ್ಸ್‍ನ ಹೇಳಿಕೆ ಭಾಷಾಂತರದ ಮಹತ್ತ್ವಕ್ಕೆ ಸಾಕ್ಷಿ.

	5 ಆದರ್ಶ ಭಾಷಾಂತರಕಾರನ ಅರ್ಹತೆಗಳು ಮತ್ತು ಆದರ್ಶಭಾಷಾಂತರದ ಲಕ್ಷಣಗಳು: ಆದರ್ಶ ಭಾಷಾಂತರಕಾರ ಮೂಲತಃ ಉತ್ತಮ ಲೇಖಕನಾಗಿದ್ದು ಮೂಲ ಮತ್ತು ಉದ್ದಿಷ್ಟ ಭಾಷೆಗಳ ಮೇಲೆ ಪ್ರಭುತ್ವಹೊಂದಿರಬೇಕು. ಮೊದಲನೆಯದರ ಮೇಲಿನದು ವಿಮರ್ಶಾತ್ಮಕವಾಗಿರಬೇಕು. ಎರಡನೆಯದರ ಮೇಲಿನದು ವ್ಯಾವಹಾರಿಕವಾಗಿರಬೇಕು. ಮೂಲ ಭಾಷೆಯ ಬಗೆಗಿನ ಪ್ರಭುತ್ವ ಅರ್ಥಗ್ರಹಣಕ್ಕೆ ನೆರವಾದರೆ ಉದ್ದಿಷ್ಟ ಭಾಷೆಯ ಮೇಲಿನ ಪ್ರಭುತ್ವ ಅಭಿವ್ಯಕ್ತಿಗೆ ಅನುಕೂಲವಾಗುತ್ತದೆ. ಹೀಗೆ ಉಭಯಭಾಷಾ ಪ್ರಭುತ್ವವಿಲ್ಲದಾತ ಮೂಲದ ಜೀವಕಳೆ ಎಲ್ಲವನ್ನೂ ಕಳೆದುಕೊಂಡ ಶವವನ್ನು ಮಾತ್ರ ಸೃಷ್ಟಿಸಬಲ್ಲ ಎಂದು ಒಬ್ಬ ವಿಮರ್ಶಕ ಹೇಳಿದ್ದಾನೆ,

	ಭಾಷಾಪ್ರಭುತ್ವದ ಜೊತೆಗೆ ವಿಷಯದ ಪರಿಜ್ಞಾನವೂ ಅತ್ಯಗತ್ಯ: ಯುದ್ಧ ವಿದ್ಯೆಯ ಗಂಧವೇ ಇರದಿದ್ದ ಗ್ರೀಕ್ ಭಾಷಾಪಂಡಿತನೊಬ್ಬನ ದೋಷಪೂರ್ಣ ಭಾಷಾಂತರವನ್ನು ಆಧಾರವಾಗಿ ಇಟ್ಟುಕೊಂಡು ಪ್ರಾಚೀನ ಗ್ರೀಕರಿಗೆ ಆಧುನಿಕ ಯುದ್ಧತಂತ್ರಗಳೆಲ್ಲ ತಿಳಿದಿದ್ದುವೆಂಬ ವಾದ ಮಂಡಿಸಿ ನಗೆಪಾಟಲಿಗೆ ಗುರಿಯಾದ ವಿದ್ವಾಂಸನ ನಿದರ್ಶನವನ್ನು ಮತ್ತು ತಪ್ಪು ಅಭಿಪ್ರಾಯ ಮೂಡುವಂತೆ ಬೈಬಲನ್ನು ಭಾಷಾಂತರಿಸಿದ್ದಕ್ಕಾಗಿ ವಧೆಗೆ ಗುರಿಯಾದ ಭಾಷಾಂತರಕಾರನೊಬ್ಬನ ದುರಂತದ ಉದಾಹರಣೆಯನ್ನು ಇತಿಹಾಸ ಒದಗಿಸಿದೆ. ಭಾಷೆಯ ವಿಲಾಸದಲ್ಲಿ ವಿಷಯದ ಸಮಾಧಿಯಾಗಬಾರದು. ಅಂದರೆ, ಭಾಷಾಂತರಕಾರ ತನಗೆ ಪ್ರವೇಶವಿಲ್ಲದ ಕ್ಷೇತ್ರಕ್ಕೆ ಅಂತೆಯೇ ತನಗೆ ಆಸ್ತು ಇರದಂಥ ವಿಷಯಗಳಿಗೆ ಕೈ ಹಾಕಬಾರದು.

	ಪೂರ್ವಾಗ್ರಹಮುಕ್ತತೆ ಭಾಷಾಂತರಕಾರನ ಮತ್ತೊಂದು ಅರ್ಹತೆ. ಪೂರ್ವಾಗ್ರಹಗಳು ಕೆಲವೊಮ್ಮೆ ಮೂಲವನ್ನು ತಿದ್ದುವಂತೆ ಅಥವಾ ತಪ್ಪಾಗಿ ಭಾಷಾಂತರಿಸುವಂತೆ ಆತನನ್ನು ಪ್ರೇರಿಸುವುದುಂಟು. ದುಡಿಮೆಯ ಒಲವು ಮತ್ತು ಶ್ರಮ ಸಹಿಷ್ಣತೆ ಭಾಷಾಂತರಕಾರನಿಗೆ ಅಗತ್ಯವಾದ ಇತರ ಗುಣಗಳು. ಭಾಷಾಂತರಕಾರ ಸರ್ವಜ್ಞನಾಗಿರುವುದು. ಸಾಧ್ಯವಲ್ಲವಾದ್ದರಿಂದ ಕೋಶ, ನಿಘಂಟು ಮೊದಲಾದ ಸಹಾಯಕಗಳನ್ನು ಮಾತ್ರವಲ್ಲದೆ ಅರಿತವರನ್ನು ಕೂಡ ಆಶ್ರಯಿಸಿ ವಿಶಿಷ್ಟ ಸಂದೇಹಗಳನ್ನು ಪರಿಹರಿಸಿಕೊಳ್ಳಬೇಕಾಗುತ್ತದೆ. ಕೆಲವೊಮ್ಮೆ ವಿಶಿಸ್ಟ ಶಾಸ್ತ್ರ, ಸಂಸ್ಕøತಿ, ಇತಿಹಾಸ ಮತ್ತು ರಾಜಕೀಯ ಬೆಳೆವಣಿಗೆಗಳ ಮುನ್ನೆಲೆಯಲ್ಲಿ ಮಾಹಿತಿಗಳನ್ನು ಅರ್ಥವಿಸಿಕೊಳ್ಳಬೇಕಾಗುತ್ತದೆ. ಅಂತೆಯೇ ಸ್ವನಿರಾಕರಣ ಮತ್ತು ಸ್ವಲೋಪನಗಳೂ ಭಾಷಾಂತರಕಾರನ ಅರ್ಹತೆಗಳಾಗುತ್ತದೆ. ವಿದ್ವತ್ತು, ವಿನಯ, ವ್ಯುತ್ಪತ್ತಿ. ಅಭ್ಯಾಸ, ತಾಳ್ಮೆ. ಶ್ರಮಸಹಿಷ್ಣತೆ, ಲೋಕಾನುಭವ, ಅನ್ಯಾನ್ಯಶಾಸ್ತ್ರ, ಸಂಸ್ಕøತಿ, ಇತಿಹಾಸಗಳ ಪರಿಜ್ಞಾನ ಇವೆಲ್ಲ ಮೇಳೈವಿಸಿರುವವನೆ ಆದರ್ಶಭಾಷಾಂತರಕಾರ. ಇಂಥ ಎಲ್ಲ ಗುಣಗಳೂ ಅಗತ್ಯಾನುಗುಣವಾಗಿ ಕಾರ್ಯಾನ್ವಯಗೊಂಡ ಭಾಷಾಂತರವೇ ಆದರ್ಶ ಭಾಷಾಂತರ.

	ನಿರ್ದಿಷ್ಟತೆ, ಸ್ಪಷ್ಟತೆ, ಸಂಕ್ಷಿಪ್ತತೆ, ಸರಳತೆ, ಶುದ್ಧತೆ, ಮಾಧುರ್ಯ ಇವು ಉತ್ತಮ ಭಾಷಾಂತರದ ಲಕ್ಷಣಗಳೂ ಹೌದು ಯಾವ ಭಾಷಾಂತರದಲ್ಲಿ ಮೂಲದ ವಸ್ತು ರೀತಿ ಮತ್ತು ಶೈಲಿ ಸದೃಶರೂಪದಲ್ಲಿ ಹಾಗೂ ಆದರ್ಶ ಪ್ರಮಾಣದಲ್ಲಿ ಮೈದಳೆದಿರುವುವೋ ಅದೇ ಆದರ್ಶಭಾಷಾಂತರ. ಯಾವ ಕೃತಿಯ ಭಾಷಾಂತರವನ್ನು ಭಿನ್ನರೀತಿಯಲ್ಲಿ ಅಥವಾ ಮತ್ತಷ್ಟು ಉತ್ತಮವಾಗಿ ಮಾಡಲು ಸಾಧ್ಯವಿಲ್ಲವೋ ಅದೇ ಆದರ್ಶಭಾಷಾಂತರ.

	6 ತತ್ತ್ವಗಳು : ಭಾಷಾಂತರ ಮಾಡುವಾಗ ಮೂಲದ ಶಬ್ದಗಳನ್ನು ಕೊಡಬೇಕೆ ಅಥವಾ ಅವು ವ್ಯಂಜಿಸುವ ಭಾವಗಳನ್ನು ಕೊಡಬೇಕೆ, ಭಾಷಾಂತರ ಮೂಲ ಕೃತಿ ಎಂಬಂತೆ ಓದಿಸಿಕೊಳ್ಳಬೇಕೆ ಅಥವಾ ಭಾಷಾಂತರವೆಂಬಂತೆ ಓದಿಸಿಕೊಳ್ಳಬೇಕೆ, ಮೂಲದ ಶೈಲಿಯನ್ನು ಬಿಂಬಿಸಬೇಕೆ ಅಥವಾ ಹಿಂದಿನ ಕಾಲದ ಕೃತಿಯಂತೆ ಓದಿಸಿಕೊಳ್ಳಬೇಕೆ. ಏನನ್ನಾದರೂ ಸೇರಿಸಬಹುದೆ ಮತ್ತು ಬಿಡಬಹುದೆ ಅಥವಾ ಏನನ್ನೂ ಬಿಡಬಾರದೆ ಮತ್ತು ಸೇರಿಸಬಾರದೆ. ಹಾಗೂ ಪದ್ಯವನ್ನು ಪದ್ಯರೂಪದಲ್ಲಿಯೇ ಭಾಷಾಂತರಿಸಬೇಕೆ ಅಥವಾ ಗದ್ಯ ರೂ¥ದಲ್ಲಿ ಭಾಷಾಂತರಿಸಬೇಕೆ ಎಂಬ ಪ್ರಶ್ನೆಗಳು ಸಾಮಾನ್ಯವಾಗಿ ಎದುರಾಗುತ್ತವೆ. ಇವುಗಳಿಗೆ ಉತ್ತರ ಕೊಡಬೇಕಾದರೆ ಮೊದಲು ಈ ಪ್ರಶ್ನೆಗಳನ್ನು ಉತ್ತರಿಸುವುದು ಅಗತ್ಯವಾಗುತ್ತದೆಂದು ಥಿಯೊಡೋರ್ ಸೆಮೊರಿ ಹೇಳುತ್ತಾನೆ: (i) ಲೇಖಕ ಏನು ಹೇಳಿದ್ದಾನೆ? (ii) ಅವನ ಅಭಿಪ್ರಾಯವೇನು? (iii) ಅದನ್ನು ಹೇಗೆ ಹೇಳಿದ್ದಾನೆ? ಅಂದರೆ ವಸ್ತು ಆಶಯ ಮತ್ತು ಶೈಲಿಯ ದೃಷ್ಟಿಯಿಂದ ಮೂಲಕ್ಕೆ ಸದೃಶವಾದುದುನ್ನು ಸೃಷ್ಟಿಸುವುದಕ್ಕೆ ಯಾವ ಅಂಶಗಳು ನೆರವಾಗುತ್ತವೆಯೋ ಅಥವಾ ಯಾವ ಅಂಶಗಳ ಆಧಾರದ ಮೇಲೆ ಭಾಷಾಂತರದ ಸಮರ್ಪಕತೆಯನ್ನು ಒರೆಹಚ್ಚಿನೋಡಬಹುದೋ ಅವೇ ಭಾಷಾಂತರದ ತತ್ತ್ವಗಳು. 

	ನಮಗಿರುವ ದಾರಿಗಳು ಎರಡು ಮಾತ್ರವೇ ಎನ್ನುತ್ತಾನೆ ಗಯಟೆ: ಲೇಖಕನನ್ನು ನಮ್ಮವನನ್ನಾಗಿಸಿಕೊಳ್ಳುವುದು ಅಥವಾ ಓದುಗರನ್ನು ಮೂಲಲೇಖಕನ ವಿದೇಶಿಯ ಪರಿಸರಕ್ಕೆ ಕೊಂಡೊಯ್ಯುವುದು. ಇಲ್ಲಿ ಗಯಟೆ ಕೃತಿಯ ಭಾಷಾಂತರೀಯತೆಯನ್ನು ಒತ್ತಿಹೇಳುತ್ತಾನೆ. ಸಂಪೂರ್ಣವಾಗಿ ಭಾಷಾಂತರಿಸಲು ಸಾಧ್ಯವಾಗುವಂಥದನ್ನು ಉದ್ದಿಷ್ಟಭಾಷೆಯಲ್ಲಿಯೇ ಅವತರಿಸಿದ ಕೃತಿಯೋ ಎಂಬ ಭಾವನೆ ಮೂಡುವಂತೆ ಭಾಷಾಂತರಿಸುವುದು ಅxವಾ ಈ ಅರ್ಹತೆ ಕೃತಿಗೆ ಸಂಪೂರ್ಣವಾಗಿ ಇಲ್ಲದೆ ಇದ್ದಾಗ ಓದುಗನಿಗೆ ವಿದೇಶಿಯತೆಯ ಅರಿವು ಉಂಟು ಮಾಡುವುದು.

	ಅಲೆಕ್ಸಾಂಡರ್ ಫ್ರೆಸರ್ ಟೈಟ್ಲರ್ ಈ ಕೆಳಗಿನ ನಿಯಮ ಅಥವಾ ಸೂತ್ರಗಳನ್ನು ರೂಪಿಸಿದ್ದಾನೆ : (i) ಭಾಷಾಂತರದ ಮೂಲ ಕೃತಿಯ ಭಾವನೆಗಳ ಸಮಗ್ರ ಪ್ರತಿ ಕೃತಿಯನ್ನೇ ಒದಗಿಸಬೇಕು; (ii) ಭಾಷಾಂತರ ಶೈಲಿ ಮತ್ತು ರೀತಿ ಕೃತಿಯ ಶೈಲಿ ಮತ್ತು ರೀತಿಗಳನ್ನೇ ಹೋಲುವಂತಿರಬೇಕೆ: (iii) ಭಾಷಾಂತರ ಸ್ವತಂತ್ರ ಕೃತಿ ಸಲೀಲತೆಯನ್ನು ಹೊಂದಿರಬೇಕು. ಈತನ ದೃಷ್ಟಿಯಲ್ಲಿ ವಸ್ತು. ರೀತಿ ಮತ್ತು ವಾಚನೀಯತೆಗಳೇ ಭಾಷಾಂತರದ ಮೂಲಭೂತ ತತ್ತ್ವಗಳು, ಸೆವೊರಿ ನಾಲ್ಕು ತತ್ತ್ವಗಳನ್ನು ಹೆಸರಿಸುತ್ತಾನೆ: (i) ವಿಧೇಯತೆ, (ii) ಮುಲಾಭಾಸತ್ವ (iii) ಲಕ್ಷ್ಯ, (iv) ಸಮಕಾಲೀನತ್ವ. ಈತ ಹೇಳಿರುವ ಇನ್ನೊಂದು ಮುಖ್ಯ ಸಂಗತಿ ಲಕ್ಷ್ಯವನ್ನು ಕುರಿತದ್ದು. ಅಂದರೆ ಯಾರಿಗಾಗಿ ಭಾಷಾಂತರಿಸುತ್ತಿದ್ದೇವೆ ಎಂಬುದನ್ನು ಗಮನದಲ್ಲಿಟ್ಟುಕೊಂಡೆ ಭಾಷಾಂತರಿಸಬೇಕು ಎಂಬುದು. ಉದಾಹರಣೆಗೆ ಮಕ್ಕಳಿಗಾಗಿ ಇರುವ ಕೃತಿಯನ್ನು ಪಂಡಿತರಿಗೆ ಮಾತ್ರ ಪ್ರಿಯವಾಗ ಬಹುದಾದ ವಿದ್ವತ್ಪೂರ್ಣ ಶೈಲಿಯಲ್ಲಿ ಭಾಷಾಂತರಿಸಿದರೆ ಅದು ಮೂಲೋದ್ದೇಶಕ್ಕೆ ಭಂಗತರುತ್ತದೆ. ಆದ್ದರಿಂದ ಹಾಗೆ ಮಾಡಬಾರದೆಂಬುದು ಅವನ ಅಭಿಮತ.

	ಪೋಸ್ಟ್ ಗೇಟ್ ಈ ಎಲ್ಲ ವಿಚಾರಗಳನ್ನೂ ಅತ್ಯಂತ ಸಮರ್ಪಕವಾಗಿಯೂ ವೈಜ್ಞಾನಿಕವಾಗಿಯೂ ಚರ್ಚಿಸಿದ್ದಾನೆ. ಅವನು ಹೇಳಿರುವ ತತ್ತ್ವಗಳು ಐದು (i) ವಿಧೇಯತಾತತ್ತ್ವ, (ii) ಆನಂದತತ್ತ್ವ, (iii) ಅನುರೂಪತಾತತ್ತ್ವ, (iv) ಪರಿಹಾರತತ್ತ್ವ, (v) ಮೂಲಾಭಾಸತ್ವ, ಅವನ ದೃಷ್ಟಿಯಲ್ಲಿ ವಿಧೇಯತೆ ಎಂಬುದು ಭಾಷಾಂತರಕಾರನ ಮೊತ್ತಮೊದಲ ಐತಿಹಾಸಿಕ ಕರ್ತವ್ಯ. ಮೂಲಕ್ಕೆ ಎಷ್ಟರ ಮಟ್ಟಿಗೆ ವಿಧೇಯವಾಗಿದ ಎಂಬುದರ ಮೇಲೆಯೇ ಭಾಷಾಂತರದ ಮೌಲ್ಯ ಮತ್ತು ಮಹತ್ತ್ವ ನಿರ್ಧಾರಿತವಾಗುತ್ತವೆ. ಭಾಷಾಂತರದ ಮೂಲದ ಆಶಯಕ್ಕೆ ವಿಧೇಯನಾಗಿರಬೇಕೇ ವಿನಾ ಶಬ್ದಗಳಿಗೆ ಅಲ್ಲ. ಅಂತೆಯೇ ಉದ್ದಿಷ್ಟ ಭಾಷೆಯ ಜಾಯಮಾನಕ್ಕೂ ಅವನು ವಿಧೇಯನಾಗಿರಬೇಕು. ಇಲ್ಲವಾದಲ್ಲಿ ಅತಿವಿಧೇಯತೆಯ ಮತ್ತೊಂದು ರೂಪವೇ ಆಗಿ ಉದ್ದಿಷ್ಟ ಭಾಷೆಯ ಜಾಯಮಾನಕ್ಕೆ ಒಗ್ಗದ ಕಗ್ಗಂಟಾಗುತ್ತದೆ. ಮೂಲದ ವಸ್ತುವನ್ನು ವಿರೂಪಗೊಳಿಸದೆ ಅದರ ಪ್ರಕಾರಕ್ಕೂ ವಿಧೇಯವಾಗಿರುವ ಭಾಷಾಂತರ ನಿಜಕ್ಕೂ ಗ್ರಾಹ್ಯವಾಗುತ್ತದೆ. ಅಂದರೆ ಮೂಲವನ್ನು ಯಾವ ರೀತಿಯಲ್ಲೂ ಕೆಡಿಸದೆ ಯಥಾರೂಪಲ್ಲೇ ತರಬೇಕು ಎಂಬುದು ಅವನ ಅಭಿಮತ ಇದ್ದನ್ನು ಬಿಡುವುದರಿಂದ ಇಲ್ಲದ್ದನ್ನು ಸೇರಿಸುವುದರಿಂದ ಅಥವಾ ಮೂಲವನ್ನು ಮನಬಂದತೆ ತಿರುಚುವುದರಿಂದ ಕೆಲವೊಂದ ಸಂದರ್ಭಗಳಲ್ಲಿ ಪ್ರಕಾರಾಂತರದಿಂದಲೂ ಮೂಲಕ್ಕೆ ವಿರೂಪತೆ ಉಂಟಾಗುವುದರಿಂದ ಹೀಗೆ ಮಾಡಬಾರದೆಂದು ಅವನು ಸೂಚಿಸುತ್ತಾನೆ. ಭಾಷಾಂತರ ಓದುಗಳಿಗೆ ಆನಂದ ಉಂಟುಮಾಡಬೇಕೇ ವಿನಾ ಕ್ಲೇಶ ಅಲ್ಲ ಎಂಬುದು ಎರಡನೆಯ ತತ್ತ್ವದ ಆಶಯ. ಆದರೆ ಇದು ಸಹಜವಾಗಿ ಸಾಧಿತವಾಗಬೇಕೇ ಹೊರತು ಇದಕ್ಕಾಗಿ ಹಾದಿಬಿಟ್ಟು ಹೋಗಿ ಇಲ್ಲದ ಅಥವಾ ಸಲ್ಲದ ಪ್ರಯತ್ನ ನಡೆಸಬಾರದು, ಸರಳವಾಗಿರುವುದನ್ನು ಅಲಂಕೃತಿವಾಗಿಸುವುದು, ಆಲಂಕಾರಿಕವಾಗಿರುವುದನ್ನು ಸರಳವಾಗಿಸುವುದು, ಸುಲಭವಾಗಿರುವುದನ್ನು ಕ್ಲಿಷ್ಟವಾಗಿಸುವುದು, ಕ್ಲಿಷ್ಟವಾಗಿರುವುದನ್ನು ಸುಲಭವಾಗಿಸುವುದು- ಇವೇ ಮೊದಲಾದ ಪ್ರಯತ್ನಗಳಲ್ಲಿ ತೊಡಗಬಾರದು. ಅಂದರೆ ಈ ತತ್ತ್ವ ನಿರಪೇಕ್ಷವಾದುದಲ್ಲ. ಸಾಪೇಕ್ಷವಾದುದು. ಇದು ವಿಧೇಂiÀiತಾ ತತ್ತ್ವಕ್ಕೆ ಹೊಂದಿಕೊಂಡೇ ಬರಬೇಕು. ಅಂತೆಯೇ ಯಾರಿಗಾಗಿ ಮತ್ತು ಯಾವ ಕಾಲದವರಿಗಾಗಿ ಭಾಷಾಂತರಿಸುತ್ತಿದ್ದೇವೆ ಎಂಬುದೂ ಈ ತತ್ತ್ವದ ಅಂಗವಾಗಿಯೇ ಬರುವ ವಿಚಾರ. ಭಾಷಾಂತರವೆಂಬ ಭಾವನೆ ಅಡಿಗಡಿಗೂ ಉಂಟಾಗದಂತೆ ಮೂಲತಃ ಉದ್ದಿಷ್ಟ ಭಾಷೆಯಲ್ಲಿಯೇ ರಚಿತವಾದ ಕೃತಿಯೋ ಎಂಬಂತೆ ಸಹಜವಾಗಿ ಸಲೀಲವಾಗಿ ಮತ್ತು ಮೂಲದ ಎಲ್ಲ ವಿಭವಗಳೂ ಮನವರಿಕೆಯಾಗುವಂತೆ ಭಾಷಾಂತರ ಮೈದಳೆದಿರಬೇಕೆಂಬುದನ್ನು ಮಾಲಾಭಾಸಸ್ವ- ಅಂದರೆ ಮೂಲದಂತೆ ತೋರುವಿಕೆ-ಎಂಬ ತತ್ತ್ವದ ಅಂಗವಾಗಿ ಹೇಳಿದೆ. ಮೂಲದ ಭಾವಾಂಶ ಚಿಂತನಾಂಶ ಮತ್ತು ರೂಪಾಂಶಗಳೆಲ್ಲ ಸಮಗ್ರ ರೂಪದಲ್ಲಿ ಭಾಷಾಂತರದಲ್ಲಿ ಮೈದಳೆಯ ಬೇಕೆಂಬುದನ್ನೂ ಗುಣದಲ್ಲಿ ಮಾತ್ರವಲ್ಲದೆ ಗಾತ್ರದಲ್ಲಿಯೂ ಭಾಷಾಂತರ ಮೂಲಕ್ಕೆ ಅನುರೂ¥ವಾಗಿ ಇದಬೇಕೆಂಬುದನ್ನೂ ಅನುರೂಪತಾತತ್ತ್ವ ಒತ್ತಿ ಹೇಳುತ್ತದೆ. ಮೂಲದ ಎಲ್ಲ ವೈಶಿಷ್ಟ್ಯಗಳನ್ನೂ ಅವೇ ಪ್ರಮಾಣಗಳಲ್ಲಿ ಉಳಿಸಿಕೊಳ್ಳುವುದು ಸಾಧ್ಯವಾಗದೆ ಹೋದಾಗ ಭಾಷೆಯ ಇತಿಮಿತಿಗಳಿಗೆ ಒಳಪಟ್ಟಿರುವಂತೆಯೇ ಒಂದು ರೂಪದಲ್ಲಿ ಆದ ನಷ್ಟವನ್ನು ಇನ್ನೊಂದು ರೂಪದಲ್ಲಿ ಸರಿದೂಗಿಸಿಕೊಡಲು ಪ್ರಯತ್ನಿಸಬೇಕೆಂಬುದನ್ನು ಈ ತತ್ತ್ವ ನಿರೂಪಿಸುತ್ತದೆ. ಇದು ವಿಶೇಷವಾಗಿ ರಚನಾ ಸೌಷ್ಠನಕ್ಕೆ ಸಂಬಂದಿಸಿದ ಹಾಗೂ ಕಾವ್ಯಾನುವಾದದಲ್ಲಿ ಎದುರಾಗುವ ಸಮಸ್ಯೆ. ಅಂದರೆ ಉದ್ದಿಷ್ಟ ಭಾಷೆಗೆ ಸಹಜವಾದ ಲಯ, ಪ್ರಾಸ ಮತ್ತು ಛಂದಸ್ಸುಗಳನ್ನು ಕಲ್ಪಿಸಿಕೊಂಡು ಮೂಲದಂತೆಯೇ ಭಾಷಾಂತರವನ್ನು ಪರಿಣಾಮಕಾರಿಯಾಗಿಸಬೇಕು ಎಂಬುದು ಇದರ ಆಶಯ.

	7 ಪ್ರಕಾರಗಳು: ಶಬ್ದಾನುವಾದ, ವಿಸ್ತಾರಾನುವಾದ, ನಿಕಟಾನುವಾದ, ಭಾವಾನುವಾದ, ಸಂಗ್ರಹಾನುವಾದ, ರೂಪಾಂತರ ಸರಳಾನುವಾದ, ಅರ್ಥಾನುವಾದ ಇವೇ ಭಾಷಾಂತರದ ಎಂಟು ಮುಖ್ಯ ಪ್ರಕಾರಗಳು.

	(i) ಶಬ್ದಾನುವಾದ : ಮೂಲದ ಒಂದೊಂದು ಮಾತಿಗೂ ಉದ್ದಿಷ್ಟ ಭಾಷೆಯ ಪರ್ಯಾಯ ಶಬ್ದವನ್ನು ತಂದುಹಾಕುವುದೆ ಶಬ್ದಾನುವಾದ. ಇದನ್ನು ಅತ್ಯಂತರೂಕ್ಷ ಭಾಷಾಂತರವೆಂದೂ ಯಾವುದೇ ಉತ್ತಮ ಭಾಷಾಂತರದ ಮೊದಲ ಕರಡು ಎಂದೂ ಹೇಳಲಾಗಿದೆ. ಮೇಲುನೋಟಕ್ಕೆ ಇದು ಸುಲಭವೆಂದು ತೋರಿದರೂ ವಾಸ್ತವವಾಗಿ ಹಾಗಲ್ಲ. ಒಂದೇ ಭಾಷೆಯಲ್ಲಿ ಒಂದು ಶಬ್ದಕ್ಕೆ ಇನ್ನೊಂದ ಶಬ್ದ ಸಂವಾದಿಯಲ್ಲದಿರುವಾಗ ವಿಭಿನ್ನ ಭಾಷೆಗಳ ನಡುವೆ ಅನೇಕ ಸಂzರ್ಭಗಳಲ್ಲಿ ಯಥಾವತ್ ಸಂವಾದಿತ್ವ ಸಾಧ್ಯವಾಗುವುದೇ ಇಲ್ಲ.

	(ii) ವಿಸ್ತಾರಾನುವಾದ : ಮೂಲದ ಆಶಯವನ್ನು ಮನಗಾಣಿಸಲು ವಿಸ್ತಾರಕ್ಕೆ ಕೈ ಹಾಕುವುದೇ ವಿಸ್ತಾರಾನುವಾದ. ಮೂಲದ ಭಾವ ಭಾಷಾಂತರದಲ್ಲಿಸಮರ್ಪಕವಾಗಿ ಅವತರಿಸಿಲ್ಲವೆಂಬ ಅಸಮಾಧಾನ ಮತ್ತು ಅತೃಪ್ತಿ, ಒಂದೋ ಹಲವೋ ಮಾತುಗಳನ್ನು ಅಥವಾ ಒಂದೆರಡು ವಾಕ್ಯಗಳನ್ನು ಸೇರಿಸುವುದರಿಂದ ಮೂಲದ ಭಾವ ಸ್ಪಷ್ಟವಾಗಬಹುದೆಂಬ ಭಾವನೆ, ಮೂಲಲೇಖಕ ಮನಸ್ಸು ಮಾಡಿದ್ದರೆ ಅಥವಾ ಮತ್ತಷ್ಟು ಶಕ್ತನಾಗಿದ್ದರೆ ಇನ್ನಷ್ಟು ಪರಿಣಾಮಕಾರಿಯಾಗಿ ಮೂಲದ ಭಾವವನ್ನು ನಿರೂಪಿಸಬಹುದಾಗಿತ್ತೆಂದು ಊಹಿಸಿ ತನ್ನ ಪ್ರತಿಭಸಾಮಥ್ರ್ಯ ಮೆರೆದು ಮೂಲವನ್ನು ಮತ್ತಷ್ಟು ಸುಂದರವಾಗಿಸಲು ಇಂಥ ಅವಕಾಶಗಳನ್ನು ಬಳಸಿಕೊಳ್ಳಬೇಕೆಂಬ ಚಾಪಲ್ಯ ಅಥವಾ ದೊರೆತ ಅವಕಾಶ ಬಳಸಿಕೊಂಡು ಸ್ವಂತ ಅಭಿಪ್ರಾಯಗಳನ್ನು ಪ್ರಕ್ಷೇಪಿಸುವ ಹೀನ ಪ್ರವೃತ್ತಿ, ತನ್ನ ಈ ಬಗೆಯ ವಿಸ್ತಾರನವಾದದಿಂದಲ್ಲದೆ ಓದುಗರಿಗೆ ಮೂಲದ ಎಲ್ಲ ಭಾವಗಳೂ ಗೋಚರಿಸಲಾರವೆಂಬ `ಅನುಕಂಪ ದಿಂದ ತನ್ನಲ್ಲಿ ಅಡಗಿರುವ ಕವಿ ಅಥವಾ ವ್ಯಾಖ್ಯಾನಕಾರನನ್ನು ಕಾರ್ಯೋನ್ಮುಖನಾಗಿಸಿ ಪಾಮರೋದ್ದಾರಕನಾಗಬೇಕೆಂಬ ಅಹಂಮನ್ಯತೆ ವಿಸ್ತಾರಾನುವಾದಕ್ಕೆ ಕಾರಣವಾಗುವ ಕೆಲವು ಸಂಗತಿಗಳು.

	ಭಾಷೆಯಲ್ಲಿ ಸಹಜವಾಗಿಯೇ ವಿಸ್ತಾರ ಸಂಕೋಚಗಳು ಏರ್ಪಡಬಹುದಾದ್ದರಿಂದ ಭಾಷಿಕ ಜಾಯಮಾನದ ಅಗತ್ಯದಿಂದಾಗಿ ಉಂಟಾಗುವ ವಿಸ್ತಾರವನ್ನು ವಿಸ್ತಾರನುವಾದವೆಂದು ಪರಿಗಣಿಸುವುದಿಲ್ಲ. ಹೀಗಾಗಿ ಅಗತುವಿಲ್ಲದೆ ವಿಸ್ತಾರ್ಕಕೆ ತೊಡಗುವುದು ಮಾತ್ರ ಪ್ರಶ್ನಾರ್ಹವಾಗುತ್ತದೆ. ಜೊತೆಗೆ ಆತ್ಮವಿಲಯನವನ್ನು ಭಾಷಾಂತರಕಾರನ ಅರ್ಹತೆಗಳಲ್ಲಿ ಒಂದು ಎಂದು ಒಪ್ಪವಾಗ ಅನಗತ್ಯ ವಿಸ್ತಾರಕ್ಕೆ ಕೈ ಹಾಕುವುದು ಅನಪೇಕ್ಷಣೀಯವಷ್ಟೇ ಅಲ್ಲ ಆಕ್ಷೇಪಾರ್ºವೂ ಆಗುತ್ತದೆ. ಎಲ್ಲಿ ವಿಸ್ತರಿಸಬೇಕು, ಎಲ್ಲಿ ವಿಸ್ತರಿಸಬಾರದು ಎಂಬ ಮೂಲಲೇಖಕನ ವಿವೇಚನೆಯನ್ನೂ ಬದಿಗೊತ್ತಿದಂತಾಗುತ್ತದೆ ಎಂಬುದನ್ನು ಮರೆಯುವಂತಿಲ್ಲ.

	ವಿಸ್ತಾರ ನಾಲ್ಕು ರೂಪ ತಾಳಬಹುದು: ಶಬ್ದ ವಿಸ್ತಾರ, ಭಾವ ವಿಸ್ತಾರ, ವ್ಯಾಖ್ಯಾನ ಮತ್ತು ಪ್ರಕ್ಷೇಪ.

	ಮೂಲದಲ್ಲಿ ಇರುವ ಒಂದು ಶಬ್ದಕ್ಕೆ ಬದಲಾಗಿ ಹಲವಾರು ಶಬ್ದಗಳನ್ನು ತಂದು ಗಿಡಿಯುವುದು ಶಬ್ದ ವಿಸ್ತಾರ. ಮೂಲದಲ್ಲಿ ಇಲ್ಲದ ಮೂಲದಲ್ಲಿ ಯಾವುದೇ ಆಧಾರವೂ ಇಲ್ಲದಿರುವಂಥ ಒಂದೆರಡು ಶಬ್ದಗಳನ್ನೋ ಉಪವಾಕ್ಯಗಳನ್ನೋ ವಾಕ್ಯಗಳನ್ನೋ ಸೇರಿಸುವುದರ ಮೂಲಕ ಭಾವವನ್ನು ವಿಸ್ತರಿಸಲು ನಡೆಸುವ ಪ್ರಯತ್ನ ಭಾವವಿಸ್ತಾರ. ಮೂಲದ ಭಾವನೆಯ ಬಗ್ಗೆ ವಿವರಣೆಗೆ ತೊಡಗುವುದು ವ್ಯಾಖ್ಯಾನ. ವಿಸ್ತಾರ ಮತ್ತು ವ್ಯಖ್ಯಾನಗಳಿಗೆ ಮೂಲದ ಭಾವದ ಎಳೆದ ಆಧಾರವಾದರು ಇರುತ್ತದೆ. ಆದರೆ ಪ್ರಕ್ಷೇಪಕ್ಕೆ ಯಾವ ಆಧಾರವೂ ಬೇಕಿಲ್ಲ. ಪ್ರಕ್ಷೇಪಕನ ಮನೋಧರ್ಮ ಮತ್ತು ಪ್ರಸಂಗಾನುಕೂಲತೆಗಳನ್ನು ಬಿಟ್ಟು. ಇಂಥ ಸಂದರ್ಭಗಳಲ್ಲಿ ಭಾಷಾಂತರಕಾರನ ವ್ಯಕ್ತಿತ್ವದ ಪ್ರಕ್ಷೇಪಣವಾಗುವುದರಿಂದ ಈ ಬಗೆಯ ಸೇರ್ಪಡೆಗಳು ಗುಣವಾಗದೆ ದೋಷವಾಗಿ ಪರಿಣಮಿಸುತ್ತವೆ. ಹೀಗೆ ಹಿಂಜಿ ಹೇಳುವುದರಿಂದ ಮೂಲದ ಗುಣ ನಷ್ಟವಾಗುತ್ತದೆ. ಹೀಗಾಗದಂತೆ ಮಾಡಲು ಭಾಷಾಂತರ ಮೂಲದಷ್ಟೇ ಅಡಕವಾಗಿಯೂ ನಿಷ್ಕøಷ್ಟವಾಗಿಯೂ ಇರಬೇಕು ಎಂಬ ಕಟ್ಟುಪಾಡುಗಳನ್ನು ವಿಧಿಸಲಾಗಿದೆ. ಹೀಗಾಗಿ ವಿಸ್ತಾರಾನವಾದಕ್ಕೆ ಅಂಥ ಮನ್ನಣೆಯೇನೂ ದೊರತಿಲ್ಲ.

	(iii) ನಿಕಟಾನವಾದ : ವಸ್ತು ರೀತಿ ಮತ್ತು ಶೈಲಿಗಳ ದೃಷ್ಟಿಯಿಂದ ಭಾಷಾಂತರ ಮೂಲಕ್ಕೆ ಆದಷ್ಟು ಹತ್ತಿರವಾಗಿದ್ದಲ್ಲಿ ಅದು ನಿಕಟಾನುವಾದ ಎನ್ನಿಸಿಕೊಳ್ಳುತ್ತದೆ. ಶಬ್ದಾನುವಾದ ಮೂಲದ ಅರ್ಥ ಮತ್ತು ಭಾವಗಳನ್ನು ಅಷ್ಟಾಗಿ ಲಕ್ಷಿಸದಿರುವುದರಿಂದ ಮೂಲಕ್ಕಿಂತ ಹಿಂದೆಯೇ ಬಲುದೂರ ಉಳಿಯುತ್ತದೆ. ವಿಸ್ತಾರಾನುವಾದ ಮೂಲ ಬಿಟ್ಟು ಬಲು ದೂರ ಹೋಗುವ ಅಪಾರ್ಥಕ್ಕೆಡೆಗೊಟ್ಟಿರುತ್ತದೆ. ನಿಕಟಾನುವಾದ ಈ ಯಾವುದೇ ಅತಿಗಳತ್ತ ಸರಿಯದೆ ಮೂಲಾನುಸಾರಿಯಾಗಿರಬೇಕಾದ ಆದರ್ಶವನ್ನು ಒತ್ತಿ ಹೇಳುತ್ತದೆ.

	ವಸ್ತು ರೀತಿ ಮತ್ತು ಶೈಲಿಗಳಲಿ ಯಾವುದಕ್ಕೆ ಭಂಗ ಬಂದರೂ ಅದು ನಿಕಟಾನುವಾದವಾಗದು. ಅಂದರೆ ಎಲ್ಲ ದೃಷ್ಟಿಗಳಿಂದಲೂ ಮೂಲದ ಪೂರ್ಣ ಪ್ರತಿಬಿಂಬವಾಗಿರುವಂಥದು ಮಾತ್ರವೇ ನಿಕಟಾನುವಾದವೆನ್ನಿಸಿಕೊಳ್ಳುತ್ತದೆ.

	ಸೃಜನಾತ್ಮಕ ಅನುವಾದ: ಎಷ್ಟೇ ನಿಕಡವಾಗಿ ಮೂಲವನ್ನು ಅನುಸರಿಸಿದರೂ ಶಬ್ದಾರ್ಥಗಳನ್ನು ಮೀರಿ ನಿಲ್ಲುವ ಭಾವವನ್ನು ಸೆರೆಹಿಡಿಯಲು, ಸದೃಶ ಪರಿಣಾಮಕಾರಿ ಆವರಣವನ್ನು ಸೃಷ್ಟಿಸಲು ಭಾಷಾಂತರಕಾರನ ಸೃಜನಾತ್ಮಕ ಪ್ರತಿಭೆ ಕಾರ್ಯೋನ್ಮುಖವಾಗಬೇಕು. ಮೂಲ ಕವಿಯ ಪ್ರತಿಭೆ ಹಾಗೂ ಕಲ್ಪನಾಶಕ್ತಿಯೊಡನೆ ಅನುವಾದಕನ ಪ್ರತಿಭೆ ಮತ್ತು ಕಲ್ಪನಾ ಶಕ್ತಿ ಹೆಗಲೆಣೆಯಾಗಿ ಸಾಗಿದಾಗ ಮತ್ತು ಇವರಿಬ್ಬರ ವ್ಯಕ್ತಿಗಳ ನಡುವಣ ಅಂತರ ಅತ್ಯಂತ ನ್ಯೂನೀಕೃತವಾದಾಗ ಸಿದ್ಧಿಸುವ ಅನುವಾದವೇ ಸೃಜನಾತ್ಮಕ ಅನುವಾದ. ಒಂದು ರೀತಿಯಲ್ಲಿ ಇದು ನಿಕಟಾನುವಾದದ ಮುಂದಿನ ಹಂತ, ಮೇಲಿನ ಹಂತ, ವಾಸ್ತವವಾಗಿ ಇಂಥ ಅನುವಾದ ಅಪರಾಸೃಷ್ಟಿ. ಉದ್ದಿಷ್ಟ ಭಾಷೆಯಲ್ಲಿಯೇ ಮೂಲತಃ ರಚಿತವಾದ ಕೃತಿಯೋ ಎಂಬಂತೆ ಮೂಲ ಲೇಖಕನೇ ಈ ಭಾಷೆಯಲ್ಲಿ ಹುಟ್ಟಿ ಬಂದು ಸಮರ್ಥ ರೀತಿಯಲ್ಲಿ ಕೃತಿರಚನೆ ಮಾಡಿದ್ದರೆ ಹೇಗಿರುತ್ತಿತ್ತೊ ಹಾಗಿದೆ ಎಂಬಂತೆ ತೋರುತ್ತದೆ. ಲೋಪ ಎಂಬುದೇ ಲೋಪವಾಗಿಬಿಟ್ಟಿರುವ ಇಂಥ ನಿದರ್ಶನಗಳೇ ವಾಸ್ತವವಾಗಿ ಆದರ್ಶ ಅನುವಾದಕ್ಕೆ ಉದಾಹರಣೆಗಳು.

	(iv) ಭಾವಾನುವಾದ : ಇಂಗ್ಲಿಷಿನಲ್ಲಿ ಫ್ರೀ ಟ್ರಾನ್‍ಸ್ಲೇಶನ್ ಅಥವ ಪ್ಯಾರಾಫ್ರೇಸ್ ಎಂದು ಕರೆಯುವ ಅನುವಾದ ವಿಧಾನವಿದು. ಇದರಲ್ಲಿ ಭಾವವನ್ನು ಅನುವಾದಿಸುವುದಕ್ಕೆ ಪ್ರಾಧಾನ್ಯ. ದುರದೃಷ್ಟವಶಾತ್ ಇದು ಮನಸ್ಸಿಗೆ ತೋಚಿದಂತೆ ಬರೆಯುವ-ಒಂದು ರೀತಿಯಲ್ಲಿ ಸ್ವೇಚ್ಛಾನುವಾದದ ಪ್ರವೃತ್ತಿಗೆ ಪರ್ಯಾಯವಾಗಿದೆ. ಭಾವಾನುವಾದವೆಂಬ ಹೆಸರಿನಲ್ಲಿ ಮೆರೆಯುತ್ತಿರುವ ಅನೇಕ ಕೃತಿಗಳಲ್ಲಿ ಮೂಲದ ಭಾವವೊಂದನ್ನು ಬಿಟ್ಟು ಬೇರೆಲ್ಲವೂ ಇವೆ ಎಂಬಂತಾಗಿದೆ. ಹೀಗಾಗಿ ಇದನ್ನು ಅನುವಾದದ ಒಂದು ಪ್ರಕಾರವಾಗಿ ಪರಿಗಣಿಸಲು ಅನೇಕ ವಿದ್ವಾಂಸರು ಒಪ್ಪುವುದಿಲ್ಲ. ಕೆಲವರಂತೂ ತಮ್ಮ ಅನುವಾದಗಳು ಭಾವಾನುವಾದಗಳಲ್ಲಿ ಎಂದು ಒತ್ತಿಹೇಳಬೇಕಾಗಿ ಬಂದಿರುವುದು ಈ ಪ್ರಕಾರದ ದುರುಪಯೋಗಕ್ಕೆ ಇನ್ನೊಂದು ಪುರಾವೆ.

	(v) ಸಂಗ್ರಹಾನುವಾದ: ಈ ಪ್ರಕಾರಕ್ಕೆ ಇಂಗ್ಲಿಷಿನ ಇಪಿಟೊಮಿ, ಪ್ರೆಸಿ. ಸಿನಾಪ್ಸಿಸ್, ಸಮ್ಮರಿ, ಕಂಡೆನ್ಸೇಷನ್, ಅಬ್ರಿಜ್‍ಮೆಂಟ್ ಎಂಬ ಶಬ್ದಗಳನ್ನು ಬಳಸುತ್ತಾರೆ. ಭಾಷಾಂತರದ ಈ ಪ್ರಕಾರದಲ್ಲಿ ಸಾರಗ್ರಹಣಕ್ಕೆ ಪ್ರಾಧಾನ್ಯವಿದೆ ಎಂಬುದನ್ನು ಈ ಶಬ್ದಗಳು ಸೂಚಿಸುತ್ತವೆ.

	ಗುಣ ಮತ್ತು ಗಾತ್ರದ ದೃಷ್ಟಿಯಿಂದ ಮಹತ್ತ್ವ ಪೂರ್ಣವಾಗಿರುವ ಕೃತಿಗಳನ್ನು ಇವೆರಡಕ್ಕೂ ಲೋಪಬರದಂತೆ ಭಾಷಾಂತರಿಸುವುದು ವ್ಯವಹಾರಿಕವಾಗಿ ಸಾಧ್ಯವಾಗದಾಗ, ಉದ್ದಿಷ್ಟಭಾಷೆಗೆ ಅಪರಿಚಿತನಾಗಿರುವ ಲೇಖಕನನ್ನು ಪರಿಚಯಿಸಿ ಕೊಡುವ ಸಂದರ್ಭದಲ್ಲಿ ಮೂಲ ಮತ್ತು ಉದ್ದಿಷ್ಟಭಾಷೆಗಳ ನಡುವೆ ಸಾಂಸ್ಕøತಿಕ ಅಂತರವಿದ್ದು ಅಂಥ ಅಂಶಗಳನ್ನು ಯಾವುದೇ ರೂಪದಲ್ಲಿ ಅಳವಡಿಸಲು ಸಾಧ್ಯವಾಗದಾಗ 'ಸುಕುಮಾರ ಓದುಗರಿಗಾಗಿ ಮೂಲದ ಅಸ್ವಾರಸ್ಯಕರ ಹಾಗೂ ಅಮಹತ್ತ್ವ ಅಂಶಗಳನ್ನು ಜರಡಿಯಾಡಿಸಿ ಸಾರಭೂತ ಸಂಗತಿಗಳನ್ನು ಮಾತ್ರ ಕೊಡಬೇಕಾದಾಗ, ಅಧುನಾತಮ ಸಂಶೋಧನೆಗಳ ಮತ್ತು ಪ್ರಕಟಣೆಗಳ ಸಾರಾಂಶವನ್ನು ಶೈಕ್ಷಣಿಕ ಉಪಯುಕ್ತತೆಯ ದೃಷ್ಟಿಯಿಂದಲಾದರೂ ಸಿದ್ಧಪಡಿಸುವುದು ಅಪೇಕ್ಷಣೀಯವೂ ಅನಿವಾರ್ಯವೂ ಆದಾಗ ಸಂಗ್ರಾಹಾನುವಾದ ವಿಧಾನವನ್ನು ಆಶ್ರಯಿಸಬೇಕಾಗುತ್ತದೆ. ಲೇಖನ ಕಲೆಯ ದೃಷ್ಟಿಯಿಂದ ಇದು ಗಮನಾರ್ಹವಾಗುತ್ತದೆ. ಏಕೆಂದರೆ ಶಬ್ದಗಳ ಔಚಿತ್ಯ ಪೂರ್ಣ ಆಯ್ಕೆಯ, ಅರ್ಥಪೂರ್ಣ ಆದರೆ ಸಂಕ್ಷಿಪ್ತ ವಾಕ್ಯಗಳನ್ನು ರಚಿಸುವ. ವಿಚಾರಗಳನ್ನು ತರ್ಕಬದ್ದರೀತಿಯಲ್ಲಿ ಮಂಡಿಸುವ ಆಲೋಚನೆ ಅನುಭವಗಳನ್ನು ಸ್ಪಷ್ಟವಾಗಿ, ಸಂಗ್ರಹವಾಗಿ ಹಾಗೂ ಪರಿಣಾಮಕಾರಿಯಾಗಿ ಹೇಳುವ ಕಲೆಯನ್ನು ಇದು ಕಲಿಸಿಕೊಡುತ್ತದೆ.

	ಸಂಗ್ರಹಾನುವಾದಕ್ಕೆ ತೊಡಗುವಾಗ ಶಬ್ದಶಬ್ದವನ್ನೂ ವಾಕ್ಯವಾಕ್ಯವನ್ನೂ ಮೈಯೆಲ್ಲ ಕಣ್ಣಾಗಿ ಗಮನಿಸಬೇಕು: ಶಬ್ದಗಳ ನಿಷ್ಕøಷ್ಟ ಅರ್ಥ ಏನೆಂಬುದನ್ನು ತಿಳಿದುಕೊಳ್ಳಬೇಕು. ಏಕೆಂದರೆ ಒಂದು ಪ್ರಕರಣದಲ್ಲಿ ಒಂದು ವಾಕ್ಯವೋ ಶಬ್ದವೃಂದವೋ ನುಡಿಗಟ್ಟೋ ಅಷ್ಟೇ ಏಕೆ, ಏಕೈಕ ಶಬ್ದವೇ ಅತ್ಯಂತ ಮಹತ್ತ್ವ ಪೂರ್ಣವಾಗಿರಬಹುದು. ಅದನ್ನೆ ಸರಿಯಾಗಿ ಅರ್ಥಮಾಡಿಕೊಳ್ಳದಿದ್ದರೆ ಆ ಪ್ರಕರಣದ ಆಶಯವೇ ನಮಗೆ ತಿಳಿಯದೆ ಹೋಗಬಹುದು. ತಪ್ಪಾಗಿ ಅರ್ಥ ಮಾಡಿಕೊಂಡರಂತೂ ಅನಾಹುತಕ್ಕೆ ಎಡೆದೊರೆಯಬಹುದು. ಮತ್ತೊಂದು ಮುಖ್ಯ ಸಂಗತಿ ಎಂದರೆ ಯಾವ ಸಂಗತಿ ಅಥವಾ ಅಂಶಗಳನ್ನು ಬಿಡುವುದರಿಂದ ಆಯ್ಕೆಯಲ್ಲಿ ವಿಶೇಷ ನಷ್ಟವೇನೂ ಉಂಟಾಗುವುದಿಲ್ಲ ಎಂಬುದನ್ನು ಕಂಡುಕೊಳ್ಳುವ ಶಕ್ತಿ. ಅಂದರೆ ರಸಚೋದಿತವಾದ ಔಚಿತ್ಯಪ್ರಜ್ಞೆ ಸಂಗ್ರಹಾನುವಾದಕನಿಗೆ ಅಗತ್ಯ. ಗಾತ್ರದಲ್ಲಿ ಕಿರಿದಾದರೂ ಗುಣದಲಿ ಹಿರಿದಾಗಿಯೇ ಇರಬೇಕಾದುದು ಸಂಗ್ರಹಾನುವಾದದ ಅಗತ್ಯವೂ ಹೌದು.

	(vi) ರೂಪಾಂತರ: ಇಂಗ್ಲಿಷಿನಲ್ಲಿ ಇದು ಅಡ್ಯಾಪ್ಟೇಷನ್, ದೇಶ ಕಾಲಗಳಿಗೆ ಸಂಬಂಧಿಸಿದಂತೆ ಅಥವಾ ಹೊಂದುವಂತೆ ಮೂಲಕೃತಿಯನ್ನು ಇನ್ನೊಂದು ಭಾಷೆಗೆ ಅಳವಡಿಸುವುದೇ ರೂಪಾಂತರ, ಭಾಷಿಕ, ಸಾಮಾಜಿಕ, ಸಾಂಸ್ಕøತಿಕ ಹಾಗೂ ಕೆಲವೊಮ್ಮೆ ಐತಿಹಾಸಿಕ ಕಾರಣಗಳಿಂದಾಗಿ ಯಾವ ಒಂದು ಅಂಶವನ್ನೂ ಬಿಡದಂತೆ ಎಲ್ಲ ಕೃತಿಗಳನ್ನೂ ಯಥಾವತ್ತಾಗಿ ಭಾಷಾಂತರಿಸುವುದು ಸಾಧ್ಯವಾಗದು. ಹಾಗೆ ಮಾಡಿದರೂ ಕೃತಕತೆ ಅನಿವಾರ್ಯವಾಗಿ ತಲೆಹಾಕಿರುವುದುಂಟು. ವ್ಯಕ್ತಿನಾಮ ಮತ್ತು ಸ್ಥಳನಾಮಗಳನ್ನು ಬದಲಾಯಿಸುವಷ್ಟರಿಂದಲೇ ಕೃತಕತೆ ಇಣುಕದಂತೆ ಮಾಡುವುದು ಸಾಧ್ಯವಾಗದು. ಮೂಲದ ಸತ್ತ್ವ ಮತ್ತು ಶೈಲಿ ಅನುಸರಿಸಿ ರಚಿತವಾದ ಕೃತಿಯೇ ರೂಪಾಂತರ. ಮೂಲಕೃತಿ ರೂಪಾಂತರಕ್ಕೆ ಪ್ರೇರಕವೂ ಪೋಷಕವೂ ಆಗಿರುತ್ತದೆ ಅಷ್ಟೇ. ಅಂದರೆ ತನ್ನ ಸಾಂಸ್ಕøತಿಕ ಹಿನ್ನೆಲೆಯಲ್ಲಿ ಮೂಲಕ್ಕೆ ಸದೃಶವಾದ ಕೃತಿಯೊಂದನ್ನು ರೂಪಾಂತರಕಾರ ಸೃಷ್ಟಿಸುತ್ತಾನೆ. ಈ ದೃಷ್ಟಿಯಲ್ಲಿ ಇದು ಶುದ್ಧ ಭಾಷಾಂತರದ ಕಕ್ಷೆಯಲ್ಲಿ ಬರುವುದಿಲ್ಲ. ಬಿಎಂಶ್ರೀ ಯವರ ಅಶ್ವತ್ಥಾಮನ್, ಆನಂದರ ಪುರುಷಾಮೃಗ ಇzಕ್ಕೆ ಉತ್ತಮ ನಿದರ್ಶನಗಳು. ಕೆಲವು ವೇಳೆ ಯಥಾರ್ಥ ಅನುವಾದ ಸಾಧಿಸಲಾಗದಂಥ ಪವಾಡವನ್ನು ರೂಪಾಂತರಗಳು ಸಾಧಿಸಿವೆ.

	ರೂಪಾಂತರವೂ ಆಕ್ಷೇಪದೂರವಾಗಿಲ್ಲ. ಇವನ್ನು ವ್ಯಭಿಚಾರವೇಂದೂ ಎರವಲು ಕಿರೀಟ ಧರಿಸಿ ಮೆರೆಯುವ ಪ್ರಯತ್ನವೆಂದೂ ಹರಣಕ್ಕೆ ಸಮಾನವಾದುದೆಂದೂ ಖಂಡಿಸಲಾಗಿದೆ. ಆದರೆ ರೂಪಾಂತರದಲ್ಲೂ ಭಾಷಾಂತರಕಾರ ವಿಧೇಯನಾಗಿರುತ್ತಾನೆಂಬುದನ್ನು ನಿರ್ಲಕ್ಷಿಸಬಾರದು. ಎ.ಎನ್. ಮೂರ್ತಿರಾವ್ ಹೇಳಿರುವಂತೆ 'ಇಲ್ಲಿ ವಿಧೇಯತೆ ಎಂಬುದು ಮೂಲದ ಆಶಯವೆಂದು ಹೇಳಲಾಗುವ ಕೈಗೆಟುಕದ ವಸ್ತುವಿನ ಬಗೆಗಿನ ವಿಧೇಯತೆಯಾಗಿರುತ್ತದೆ,' ಅಂತೆಯೇ ಭಾಷಾಂತರದ ಯಾವೊಂದು ಪ್ರಕಾರವೂ ಪರಿಣಾಮದ ದೃಷ್ಟಿಯಿಂದ ಸಾಧಿಸಲಾಗದೆ ಇರುವುದನ್ನು ಅನನ್ಯ ರೀತಿಯಲ್ಲಿ ಈ ಪ್ರಕಾರ ಸಾಧಿಸುತ್ತದೆ.

	(vii) ಸರಳಾನುವಾದ: ಇಂಗ್ಲಿಷಿನ ಇದು ಬೇಸಿಕ್ ಟ್ರಾನ್‍ಸ್ಲೇಶನ್ ಮೂಲದ ವಸ್ತು, ರೀತಿ ಮತ್ತು ಶೈಲಿ ಅನುವಾದದಲ್ಲಿ ಜವತರಿಸುವಂಥೆ ಮಾಡಿದರೂ ಯಾರಿಗಾಗಿ ಅನುವಾದ ಮಾಡಿರುತ್ತೇವೆಯೋ ಅವರನ್ನು ಅದು ತಲಪದೆ ಇದ್ದಲ್ಲಿ ಅನುವಾದದ ಉದ್ದೇಶವೇ ವಿಫಲವಾಗುತ್ತದೆ. ಅಂದರೆ ಸರಳಾನವಾದ ನಿರ್ದಿಷ್ಟ ಓದುಗರನ್ನು ದೃಷ್ಟಿಯಲ್ಲಿರಿಸಿಕೊಂಡು ಭಾಷೆಯ ಮೂಲ ಪದಕೋಶವನ್ನಷ್ಟೇ ಆದಷ್ಟು ಮಟ್ಟಿಗೂ ಬಳಸಿಕೊಂಡು ಮಾಡುವ ಅನುವಾದ. ಇಲ್ಲಿ ಲಕ್ಷ್ಯ ಒಂದು ನಿದಿಷ್ಟವಯೋಮಾನಕ್ಕೆ ಅಥವಾ ಬುದ್ಧಿಸ್ತರಕ್ಕೆ ಸೇರಿದ ವ್ಯಕ್ತಿಗಳು. ಶೈಕ್ಷಣಿಕ ಕ್ಷೇತ್ರದ ಒಂದು ಮಹತ್ತ್ವಪೂರ್ಣ ಉಪಕರಣವಾಗಿಯೂ ಇದು ಮಾನ್ಯವಾಗಿದೆ.

	(viii) ಅರ್ಥಾನುವಾದ: ಅರ್ಥಕ್ಕೆ ಅನುವಾದದಲ್ಲಿ ಪ್ರಾಧನ್ಯ ಎಂಬುದು ಸ್ಪಷ್ಟ. ಆದ್ದರಿಂದ ಅರ್ಥ ಗ್ರಹಿಸಿದರೆ ಉಳಿದವೆಲ್ಲ ತಾವಾಗಿಯೇ ಬಂದು ಕೂಡಿಕೊಳ್ಳುತ್ತವೆ ಎಂದು ಹೇಳಿರುವುದುಂಟು. ಆದರೆ ಅರ್ಥಾನುವಾದ ಎಂಬ ಮಾತನ್ನು ಇದಕ್ಕಿಂತ ಸ್ವಲ್ಪ ಭಿನ್ನ ಪರಿಕಲ್ಪನೆಯಲ್ಲಿ ಬಳಸಿದ್ದಾರೆ. ಇಂಗ್ಲಿಷಿನಲ್ಲಿ ಇದು ಸೆನ್ಸ್ ಟ್ರಾನ್‍ಸ್ಲೇಶನ್ ಅಥವಾ ವರ್ಟಿಕಲ್ ಟ್ರಾನ್‍ಸ್ಲೇಶನ್. ಅರ್ಥ, ಭಾವ, ಧ್ವನಿ ಮತ್ತು ಆಶಯಗಳನ್ನು ಶಬ್ದದ ಸಮಷ್ಟ್ಯರ್ಥ ಆಧರಿಸಿರುತ್ತದೆಂದು ಐ.ಎ.ರಿಚಡ್ರ್ಸ್ ಹೇಳಿದ್ದಾನಷ್ಟೆ. ಇವುಗಳಲ್ಲಿ 'ಭಾವ, ಧ್ವನಿ ಮತ್ತು ಆಶಯಗಳತ್ತ ಗಮನಕೊಡದೆ ಮಾಡುವ ಅರ್ಥದ ಭಾಷಾಂತರವೇ ಅರ್ಥಾನುವಾದ ಎಂದಿದ್ದಾನೆ ಎಸ್.ಬಿ.ವೈನ್‍ಬರ್ನ್. ಈ ಹೇಳಿಕೆಯನ್ನು ಸ್ವಲ್ಪ ಪರಿಷ್ಕರಿಸಿ ಭಾವ ಧ್ವನಿ ಮತ್ತು ಆಶಯಗಳಿಗೆ ವಿಶೇಷ ಗಮನಕೊಡದೆ ಮೂಲದ ಅರ್ಥವನ್ನು ಅಳವಡಿಸಿಕೊಳ್ಳುವ ಪ್ರಯತ್ನ ಎಂದು ಇದನ್ನು ವಿವರಿಸುವುದು ಉತ್ತಮವೆಂದು ತೋರುತ್ತದೆ. ಏಕೆಂದರೆ ಯಾವುದೇ ಅಭಿವ್ಯಕ್ತಿಯ ಭಾವ, ಧ್ವನಿ, ಹಿನ್ನಲೆ ಮತ್ತು ಆಶಯಗಳನ್ನು ಪರಿಗಣಿಸದೆ ನಮಗೆ ತೋಚಿದ ಅರ್ಥವನ್ನು ಆರೋಪಿಸುವುದು ಅವಿವೇಕ.

	8 ಸಮಸ್ಯೆಗಳು: ಭಾಷೆಗಳ ನಡುವಣ ಅಸಾಮಂಜಸ್ಯ, ಭಿನ್ನಪರಿಸರಗಳು, ಭಿನ್ನ ಸಂಸ್ಕøತಿಗಳು ಮತ್ತು ಭಿನ್ನ ವ್ಯಕ್ತಿತ್ವಗಳು ಭಾಷಾಂತರದ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಇವನ್ನು ಬಾಹ್ಯ ಮತ್ತು ಆಂತರಿಕ ಸಮಸ್ಯೆಗಳೆಂದು ವರ್ಗೀಕರಿಸಬಹುದು. ಭಾಷೆ ಮತು ಸಂಸ್ಕøತಿಗೆ ಸಂಬಂಧಿಸಿದ ಸಮಸ್ಯೆಗಳೆಂದು ಬಾಹ್ಯ ಸಮಸ್ಯೆಗಳೆಂದೂ ವ್ಯಕ್ತಿತ್ವಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಆಂತರಿಕ ಸಮಸ್ಯೆಗಳೆಂದೂ ಹೆಸರಿಸಲಾಗಿದೆ. ಭಾಷಾಸಂಬಂಧ ಸಮಸ್ಯೆಗಳನ್ನು ಕೋಶಾತ್ಮಕವೆಂದೂ ವ್ಯಾಕರಣಾತ್ಮಕವೆಂದೂ ಉಪವರ್ಗೀಕರಿಸಲಾಗಿದೆ. ಶಬ್ದದ ರೂಪ, ಧ್ವನಿ ಮತ್ತು ಅರ್ಥಸಂಬಂಧ ತೊಡಕುಗಳೇ ಕೋಶಾತ್ಮಲ ಸಮಸ್ಯೆಗಳು ವ್ಯಾಕರಣ ಪ್ರಕ್ರಿಯೆ ಮತ್ತು ರಚನಾಸಂಬಂಧವಾದ ತೊಡಕುಗಳು ವ್ಯಾಕರಣಾತ್ಮಕ ಸಮಸ್ಯೆಗಳು.

	ಭಾಷಾಂತರದ ಮೊತ್ತಮೊದಲ ಹಾಗೂ ಮೂಲಭೂತ ಸಮಸ್ಯೆಯೆಂದರೆ ಗ್ರಹಣ ಮತುತ ಅಭೀವ್ಯಕ್ತಿ. ಉಭಯ ಭಾಷೆಗಳು ಮತ್ತು ವಿಷಯದ ಮೇಲಿನ ಪ್ರಭುತ್ವ ಸಮರ್ಥವಾಗಿದ್ದಲ್ಲಿ ಇವು ಸಮರ್ಪಕವಾಗಿ ಸಾಧಿತವಾಗಿರುತ್ತವೆ. ಇಲ್ಲವಾದಲ್ಲಿ ಮೂಲದ ಅರ್ಥ, ಭಾವ, ಆಶಯಗಳಿಗೆಲ್ಲ ನಾವೇ ಗ್ರಹಣಹಿಡಿಸಿಬಿಡುವ ಅಪಾಯವಿರುತ್ತದೆ. ಇದರಿಂದ ಪಾರಾಗಲು ಭಾಷಾಂತರಕಾರ ಆಶ್ರಯಿಸುವ ಸಾಧನಗಳಲ್ಲಿ ಹಲವು ಬಗೆಯ ಕೋಶಗಳಿಗೆ ಮುಖ್ಯಸ್ಥಾನವಿದೆ. ಕೋಶಗಳು ಮಾರ್ಗದರ್ಶಿಗಳಾಗಿರುವುವಾದರೂ ಅವನ್ನು ಎಚ್ಚರಿಕೆಯಿಂದ ಬಳಸಬೇಕಾಗುತ್ತದೆ. ವಿವೇಚನಾರಹಿತವಾಗಿ ಬಳಸಿದರೆ ಅವು ಅನುವಾದಕರನ್ನು ಮಾತ್ರವಲ್ಲದೆ ಅನುವಾದದ ಓದುಗರನ್ನೂ ದಾರಿತಪ್ಪಿಸುತ್ತವೆ, ಕೋಶಗಳಿಗೂ ಕೆಲವು ಸೀಮಿತಗಳಿವೆ; ಭಾಷೆ ಸದಾ ಬೆಳೆಯುತ್ತಿರುವ ಒಂದು ಸಾವಯವ ವ್ಯವಸ್ಥೆ; ಇದಕ್ಕೆ ವೈಜ್ಞಾನಿಕ, ರಾಜಕೀಯ ಮತ್ತು ಸಾಂಸ್ಕøತಿಕ ಕಾರಣಗಳಿಂದ ವಿಶೇಷಾರ್ಥಗಳೂ ನಿರ್ಬಂಧಗಳೂ ಬೆಸೆದುಕೊಳ್ಳುತ್ತ ಹೋಗುತ್ತವೆ. ಎಂದೇ ಅನುವಾದಕ ತುಂಬ ಜಾಗೃತನೂ ಸಂವೇದನಾಶೀಲನೂ ಆಗಿರಬೇಕಾಗುತ್ತದೆ. ಕೋಶನೆರವಿಗೆ ಬಾರದೆ ಹೋದಾಗ ಆಯಾ ಕ್ಷೇತ್ರಗಳಲ್ಲಿಯ ತಜ್ಞರ ನೆರವು ಪಡೆಯಬೇಕಾಗುತ್ತದೆ.

	ಯಾವುದೇ ಎರಡು ಭಾಷೆಗಳ ನಡುವೆ ಒಂದರ ಎಲ್ಲ ಶಬ್ದಗಳಿಗೂ ಇನ್ನೊಂದರಲ್ಲಿ ಸಂವಾದೀ ಶಬ್ದಗಳಿರಬೇಕೆಂದೇನೋ ಇಲ್ಲ. ದ್ವಿಭಾಷಾ ವಿವರಣೆಗಳನ್ನು. ಇಂಥಲ್ಲಿ ಅನುವಾದಕ ಎಚ್ಚರಿಕೆಯಿಂದ ಶಬ್ದಗಳನ್ನು ಆಯಬೇಕಾಗುತ್ತದೆ. ಮೂಲಶಬ್ದ ಉದ್ದಿಷ್ಟ ಭಾಷೆಯ ಜಾಯಮಾನಕ್ಕೆ ಒಗ್ಗುವಂತಿದ್ದರೆ ಅದನ್ನು ಯಥಾವತ್ತಾಗಿ ಇಲ್ಲವೇ ಅಲ್ಪಸ್ವಲ್ಪ ಮಾರ್ಪಾಡುಮಾಡಿ ಸ್ವೀಕರಿಸಬಹುದು. ಶಬ್ದದ ವಿಶ್ಲೇಷಣೆಯಿಂದ ಅರ್ಥವನ್ನು ಹೊರಡಿಸಿ ಹೊಸಶಬ್ದವನ್ನು ಸೃಷ್ಟಿಸಬಹುದು ಅಥವಾ ಟಂಕಿಸಬಹುದು. ಈ ವಿದಾನಗಳು ನೆರವಿಗೆ ಬಾರದೆ ಹೋದಾಗ ವಿವಿರಸಹಿತವಾಗಿ ಅರ್ಥವ್ನನು ಮನಗಾಣಿಸುವ ವಿವರಣಕ (ಕ್ಲಾಸಿಫೈಯರ್) ವಿಧಾನವನ್ನು ಆಶ್ರಯಿಸಬಹುದು. ಉದಾಹರಣೆಗೆ ಪ್ಲ್ಯಾಟಿನಮ್ ಶಬ್ದವ್ನನು ಮೊದಲ ಬಾರಿಗ ಬಳಸುವಾಗ ಪ್ಲ್ಯಾಟಿನಮ್ ಎಂಬ ಅಮೂಲ್ಯ ಲೋಹ ಎಂದು ವಿವಿರಿಸಿ ಮುಂದೆ ಅದೇ ಶಬ್ದವನ್ನು ಬಳಸಬಹುದು. ಈ ವಿಧಾನ ಲಭ್ಯವಾಗಿರುವುದರಿಂದ ಭಾಷಾಂತರಿಸಲು ಸಾಧ್ಯವಾಗದಂಥ ವಿಚಾರ ಯಾವುದೂ ಉಳಿಯುವುದಿಲ್ಲವೆಂದು ಯೂಜಿನ್ ಎ. ನೀಡ ಮೊದಲಾದ ವಿದ್ವಾಂಸರು ಭಾವಿಸಿದ್ದಾರೆ. ಹೀಗೆ ಲಭ್ಯ ಸಾಧನೋಪಾಯಗಳಿಂದ ಅರ್ಥಸಾಮ್ಯದ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.

	ನುಡಿಗಟ್ಟುಗಳು, ಶಬ್ದಪುಂಜಗಳು ಮತ್ತು ಗಾದೆಗಳ ವಿಷಯದಲ್ಲಿ ಕೆಲವೊಮ್ಮೆ ಶಬ್ದಾನುವಾದದಿಂದ ಅರ್ಥಸಾಮ್ಯ ಸಾಧಿಸಬಹುದು. ಉದಾಹರಣೆಗೆ Crocodile tears, lion's share, bird's-eye view, from the pan to the fire ಮುಂತಾದವನ್ನು ಮೊಸಳೆ ಕಣ್ಣೀರು,ಸಿಂಹಪಾಲು, ಪಕ್ಷಿನೋಟ ಬಾಣಲೆಯಿಂದ ಬೆಂಕಿಗೆ ಎಂದು ಅಳವಡಿಸಬಹುದು. ಕೆಲವೊಮ್ಮೆ ಅರ್ಥಸಾಮ್ಯಸಾಧಿತವಾದರೂ ಭವಸಾಮ್ಯ ಸಾಧಿಸದೆ ಹೋಗಬಹುದು. ಉದಾಹರಣೆ Herculean task, all that glitters is not gold ಎಂಬುವನ್ನು ಹಕ್ರ್ಯುಲೀಸನ ಸಾಹಸ ಮತ್ತು ಹೊಳೆಯುವುದೆಲ್ಲ ಹೊನ್ನಲ್ಲ ಎಂದು ಭಾಷಾಂತರಿಸಬಹುದು. ಆದರೆ ಇದರಿಂದ ಮೂಲಭಾವ ಮನಕ್ಕೆ ತಟ್ಟುವುದಿಲ್ಲ. ಹೀಗಲ್ಲದೇ ಭಗೀರಥ ಪ್ರಯತ್ನ ಮತ್ತು ಬೆಳ್ಳಗಿರುವುದೆಲ್ಲ ಹಾಲಲ್ಲಿ ಎಂದು ಇವನ್ನು ಸಮೀಕರಿಸಿಕೊಂಡಾಗ ಅರ್ಥವನ್ನು ಮೀರಿ ನಿಲ್ಲುವ ಭಾವವನ್ನು ಯಶಸ್ವಿಯಾಗಿ ಅವತರಿಸಿಕೊಂಡಂತಾಗುತ್ತದೆ. ಹೀಗೆ ಮಾಡಿದಾಗ ಭಾವಸಾಮ್ಯದ ಜೊತೆಗೆ ಪರಿಣಾಮಸಾಮ್ಯವೂ ಏರ್ಪಡುತ್ತದೆ. ಈ ವಿಧಾನಕ್ಕೆ ಸಮೀಕರಣ ವಿಧಾನ ಎಂದು ಹೆಸರು. ಒಟ್ಟಿನಲ್ಲಿ ಜೀವಂತ ಭಾಷೆ ಅರ್ಥ, ಭಾವ ಮತ್ತು ಪರಿಣಾಮಗಳ ದೃಷ್ಟಿಯಿಂದ ಸದೃಶವಾದುದನ್ನು ಸೃಷ್ಟಿಸಿಕೊಳ್ಳಬಹುದು.

	9 ರಚನೆಗಳು: ಒಂದೊಂದು ಭಾಷೆಯೂ ಅದರದರ ಜಾಯಮಾನಕ್ಕೆ ಅನುಗುಣವಾಗಿ ಬಗೆಬಗೆಯಾದ ವಾಕ್ಯರಚನಾವಿನ್ಯಾಸಗಳನ್ನು ರೂಪಿಸಿಕೊಂಡಿರುತ್ತದೆ. ಜೊತೆಗೆ ವಿವಿಧ ಉದ್ದೇಶಗಳಿಗೆ ಮತ್ತು ವಿಷಯಗಳಿಗೆ ಭಾಷೆಯನ್ನು ತೆರೆದಿಟ್ಟಾಗ ಹೊಸವಿನ್ಯಾಸಗಳೂ ರೂಪುಗೊಳ್ಳುವ ಸಂಭವವಿರುತ್ತದೆ. ಆದ್ದರಿಂದ ಜೀವಂತ ಭಷೆಗಳ ವಿಷಯದಲ್ಲಿ ಮೂಲಭಾಷೆಯ ವಿವಿಧ ರಚನಾವಿನ್ಯಾಸಗಳಿಗೆ ಸಂವಾದಿಯಾದ ಉದ್ದಿಷ್ಟ ಭಾಷೆಯ ವಿನ್ಯಾಸಗಳು ಯಾವುವು ಎಂಬುದನ್ನು ಕಂಡುಕೊಳ್ಳುವುದೇ ನಾವು ಮಾಡಬೇಕಾದ ಕಾರ್ಯ ಇಲ್ಲಿ ಅಸಹಜತೆ ಮತ್ತು ಕೃತಕತೆಗಳಿಗೆ ಎಡೆದೊರೆಯದಂತೆ ನೋಡಿಕೊಳ್ಳುವುದಲ್ಲಿಯೇ ಭಾಷಾಂತರ ಕಾರನ ಜಾಣ್ಮೆ ಅಡಗಿರುತ್ತದೆ.

	ಇಂಗ್ಲಿಷ್ ಮತ್ತು ಕನ್ನಡ ವಾಕ್ಯರಚನೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಹೇಳುವುದಾದರೆ ಒಂದು ಪ್ರಧಾನವಾಕ್ಯ ಹಾಗೂ ಹಿಂಬಾಲಿಸಿ ಬೆಂಬಲಿಸಿ ಬರುವ ಅನೇಕ ವೇಳೆಬಲವಂತವಾಗಿ ಅಥವಾ ಉದ್ದೇಶಪೂರ್ವಕವಾಗಿ ಗಿಡಿಯಲಾಗಿರುವ ಉಪವಾಕ್ಯಗಳ ಸರಣಿಯನ್ನೊಳಗೊಂಡಿರುವ ದೀರ್ಘಲಂಬಿತವಾಕ್ಯಗಳು ಇಂಗ್ಮಿಷಿಗೆ ಸಹಜವಾಗಿರಬಹುದಾದರೂ ಕನ್ನಡದಲ್ಲಿ ಅಂಥ ವಾಕ್ಯಗಳನ್ನು ಹಲವಾರು ವಾಕ್ಯಗಳಾಗಿ ಒಡೆಯುವುದು ಅಗತ್ಯ, ಏಕೆಂದರೆ ಚಿಕ್ಕಚೊಕ್ಕ ವಾಕ್ಯಗಳು ಕನ್ನಡದ ಜಾಯಮಾನಕ್ಕೆ ಚೆನ್ನಾಗಿ ಒಗ್ಗುವಂಥವು. ಹಾಗೆ ಮಾಡದಿದ್ದರೆ ಕೃತಕತೆಗೆ ಎಡೆಗೊಟ್ಟಂತೆ ಆಗುತ್ತದೆ. ಮೂಲದಂತೆಯೇ ಉದ್ದುದ್ದ ವಾಕ್ಯಗಳನ್ನು ಹೆಣೆಯುವ ಈ ಸಾಹಸ ಒಂದು ಅತಿರೇಕವನ್ನು ಸೂಚಿಸಿದರೆ ಮೂಲದಲ್ಲಿಯೇ ಸಣ್ಣ ಸಣ್ಣ ವಾಕ್ಯಗಳಿರುವಾಗ ಅವನ್ನೆಲ್ಲ ಒಂದೇ ದೊಡ್ಡ ವಾಕ್ಯವಾಗಿ ಪೋಣಿಸುವ ಪ್ರಯತ್ನ ಇನ್ನೊಂದು ಅತಿರೇಕ ಸೂಚಿಸುತ್ತದೆ, ಅಂತೆಯೆ if, because, therefore, since. ಮೊದಲಾದ ಸಂಬಂಧಕಾರಕ ಅವ್ಯಯಗಳಿಂದ ಮೊದಲಾಗುವ ಇಂಗ್ಲಿಷ್ ವಾಕ್ಯಗಳನ್ನು ಅದೇ ರೀತಿಯಲ್ಲಿ ಅನುವಾಗಿಸಿಕೊಳ್ಳಲಾಗುವುದಿಲ್ಲ. ಇವೆಲ್ಲ ಸಂಬಂಧಪಟ್ಟ ಉಪವಾಕ್ಯಗಳ ಅಂತಿಮ ಘಟಕಗಳಾಗಿ ಸೇರಿಕೊಳ್ಳುತ್ತವೆ. ಪ್ರಧಾನವಾಕ್ಯ ಮತ್ತು ಉಪವಾಕ್ಯಗಳನ್ನು ಜೋಡಿಸುವ whose, how' when' what' which' that' whom' before' after, without, while ಮೊದಲಾದ ಅವ್ಯಯಗಳು ಬಳಕೆಯಾಗಿದ್ದಾಗ, ಉಪವಾಕ್ಯದ ಸ್ಥಳಾಂತರಣ ಕನ್ನಡಕ್ಕೆ ಸಹಜವಾಗುತ್ತದೆ ಉದಾಹರಣೆಗೆ  I am asking you where it is ವಾಕ್ಯವನ್ನು 'ನಾನು ನಿನ್ನನ್ನು ಕೇಳುತ್ತದ್ದೇನೆ ಅದು ಎಲ್ಲಿದೆ ಎಂದು ಇಡುವುದಕ್ಕೆ ಬದಲಾಗಿ 'ಅದು ಎಲ್ಲಿದೆ ಎಂದು ನಿನ್ನನ್ನು ಕೇಳುತ್ತಿದ್ದೇನೆ; ಎಂದು ಅಳವಡಿಸಿಕೊಳ್ಳುವುದು ಕನ್ನಡಕ್ಕೆ ಸಹಜ. ಉಪವಾಕ್ಯಗಳ ಸ್ಥಳಾಂತರಣ ಅಪರಾಧವೇನೂ ಆಗುವುದಿಲ್ಲ. ಇದೇರೀತಿ, ಕರ್ಮಣಿ ಪ್ರಯೋಗ ಮತ್ತು ಪರೋಕ್ಷಕಥನ ಕನ್ನಡಕ್ಕೆ ಅಷ್ಟಾಗಿ ಹೊಂದುವುದಿಲ್ಲ. ಅನಿರ್ದೇಶ ಮತ್ತು ನಿರ್ದೇಶ ಗುಣವಾಚಿಗಳು ಮತ್ತು ಪೂರ್ವಗಾಮೀ ಕ್ರಿಯೆಗಳು ಕನ್ನಡಕ್ಕೆ ಅನಗತ್ಯವಾಗಿರುವುದರಿಂದ ಭಾಷಾಂತರಿಸಿಕೊಳ್ಳುವುದು ಅಸಹಜವಾಗುತ್ತದೆ. ವಿಭಕ್ತಿ ಪ್ರತ್ಯಯಗಳ ಬಳಕೆಯ ವಿಚಾರದಲ್ಲೂ ನಾವು ಎಚ್ಚರದಿಂದಿದ್ದು ಅನಗತ್ಯವಾಗಿರುವಾಗ 'ಉ' ಮತ್ತು 'ಅನ್ನು ಗಳನ್ನುಬಿಡುಚುದು ಉಚಿತ. 'ಇಂದ ಪ್ರತ್ಯಯವನ್ನು 'ಕ್ಕಿಂತ ಎಂಬುದಕ್ಕೆ ಪರ್ಯಾಯವಾಗಿ ಬಳಸಿದಾಗ ತಪ್ಪು ಅಭಿಪ್ರಾಯ ಮೂಡುವ ಅಪಾಯವೂ ಉಂಟು. ತರ-ತಮವಾಚಿಗಳ ಬಳಕೆಯ ವಿಷಯದಲ್ಲಿಯೂ ನಮ್ಮ ಭಾಷೆ ಎಷ್ಟು ವೈವಿಧ್ಯಮಯವಾಗಿ-(i)-ತರ, -'ತಮ್ಮ ಗಳನ್ನು ಪರಸರ್ಗಗಳಾಗಿ ಸೇರಿಸುವ ಮೂಲಕ, (ii) ಅತಿ-', -'ಸರ್ವ, ಮೊದಲಾದ ವಿಶೇಷಣಗಳನ್ನು ಉಪಸರ್ಗವೆಂಬಂತೆ ಸೇರಿಸುವುದರ ಮೂಲಕ (iii) ವಿಶೇಷಣ ಮತ್ತು ಉಪಸರ್ಗಯುಕ್ತ, ವಿಶೇಷಣಗಳ ಸಂಯೋಗದ ಮೂಲಕ, (iv) ದ್ವಿರುಕ್ತಿಯ ಮೂಲಕ, (v) ಇನ್ನೂ ಮತ್ತು ಹೆಚು,್ಚ ಇನ್ನಷ್ಟು, ಮತ್ತಷ್ಟು ಮುಂತಾದ-ಕಾರ್ಯನಿರ್ವಹಿಸಬಲ್ಲದು ಎಂಬುದನ್ನು ಗುರುತಿಸಬೇಕು. ಕ್ರಿಯಾಪದ, ವಿಸ್ಮಯಾದಿ ಬೋಧಕಗಳ ಬಳಕೆಯ ವಿಷಯದಲ್ಲಿ ಜೀವಂತ ಭಾಷೆಗಳು ಬಹುತೇಕವಾಗಿ ಸಮಸಮರ್ಥವಾಗಿರುತ್ತದೆ. ಅನೇಕ ಸಂದರ್ಭಗಳಲ್ಲಿ ಅನ್ವಯಕ್ರಮವನ್ನು ಲಕ್ಷಿಸಿ ಅನುವಾದಿಸಿಕೊಳ್ಳುವುದು ಕೃತಕತೆಯನ್ನು ದೂರವಾಗಿರುವುದಲ್ಲದೆ ಪರಿಣಾಮರಮಣೀಯತೆಗೂ ಕಾರಣವಾಗುತ್ತದೆ.
	ರಚನೆಗಳನ್ನು ಬಾಹ್ಯಕೇಂದ್ರಕ (ಎಕ್ಸೊಸೆಂಟ್ರಿಕ್) ಮತ್ತು ಅಂತರಕೇಂದ್ರಕ (ಎಂಡೊಸೆಂಟ್ರಿಕ್) ಎಂದೂ ವರ್ಗೀಕರಿಸುವುದುಂಟು. ವಾಕ್ಯದ ಅರ್ಥ ಅದರಲ್ಲಿಯೇ ನಿಹಿತವಾಗಿದ್ದರೆ ಅಂಥದನ್ನು ಅಂತರಕೇಂದ್ರಕವೆಂದೂ ಇನ್ನೊಂದಿ ಶಾಸ್ತ್ರ, ಸಂಪ್ರದಾಯ ಅಥವಾ ಸಂಸ್ಕøತಿಯ ಸಂದರ್ಭದಲ್ಲಿ ಅರ್ಥವಿಸಬೇಕಾಗಿದ್ದರೆ ಅಂಥದನ್ನು ಬಾಹ್ಯಕೇಂದ್ರಕವೆಂದೂ ಪರಿಗಣಿಸಲಾಗುತ್ತದೆ. ಅಂದರೆ ಆಯಾ ಸಂದರ್ಭಗಳಲ್ಲಿ ಮಾತ್ರ ಅವುಗಳ ಅರ್ಥ ಸ್ಪಷ್ಟವಾಗುತ್ತದೆ. ಒಂದು ಅರ್ಥದಲ್ಲಿ ಗಾದೆಗಳು, ರೂಪಕಗಳು, ಕೆಲವು ಬಗೆಯ ಅಲಂಕಾರಗಳು, ಶಾಸ್ತ್ರೋಕ್ತಿಗಳು ಇವೆಲ್ಲ ಬಾಹುಕೇಂದ್ರಕ ರಚನೆಗಳೇ ಆಗುವುದರಿಂದ ಅನುವಾದಕ ತುಂಬ ವಿವೇಚನಾಶೀಲನಾಗಿರಬೇಕಾಗುತ್ತದೆ.

	ಅಂತೆಯೇ ಸಂಸ್ಕøತಿ ಸಂಪ್ರದಾಯಗಳು, ಸಾಮಾಜಿಕ ವಿಧಿ ನಿಷೇಧಗಳು. ವ್ಯಾಕರಣ ಪ್ರಕ್ರಿಯೆಗಳು, ರಾಜಕೀಯ ಧೋರಣೆಗಳು ಕೂಡ ಅನುವಾದಕ್ಕೆ ಸಮಸ್ಯೆಗಳನ್ನೊಡ್ಡುತ್ತವೆ. ಉದಾಹರಣೆಗೆ ಎದೆಎದೆ ಹೊಡೆದುಕೊಳ್ಳುವುದು, ಬಾಯಿಬಡಿದುಕೊಳ್ಳ್ಳುವುದು, ತಲೆ ಕೆದರಿಕೊಳ್ಳುವುದು ಕೆಲವು ಸಂಸ್ಕøತಿಗಳಲ್ಲಿ ಉಲ್ಲಾಸಸೂಚಕವಾಗಿರುತ್ತದೆ. ಒಂದು ನಾಡಿನಲ್ಲಿ ಸ್ವಾಗತಾರ್ಹ ಬಣ್ಣ ಇನ್ನೊಂದು ನಾಡಿನಲ್ಲಿ ನಿಷಿದ್ಧವಾಗಿರಬಹುದು. ಒಂದು ನಾಡಿನಲ್ಲಿ ಪೂಜಾರ್ಹವಾದ ಪಾಶ್ರ್ವ ಇನ್ನೊಂದು ನಾಡಿನಲ್ಲಿ ಅಗೌರವದ ಪ್ರತೀಕವಾಗಬಹುದು. ಸಾಮಾಜಿಕ ವಿಧಿ ನಿಷೇಧಗಳು ವಿಲಕ್ಷಣವೂ ವಿಶಿಷ್ಟವೂ ಆಗಿರಬಹುದು. ವ್ಯಾಕರಣ ಪ್ರಕ್ರಿಯೆಗಳೂ-ಉದಾಹರಣೆಗೆ ಲಿಂಗ ವಚನ ವ್ಯವಸ್ಥೆಗಳು- ವಿಚಿತ್ರವಾಗಿರ ಬಹುದು. ಆದರೂ ವಿವೇಚನೆ, ಅಧ್ಯಯನ, ಅಭ್ಯಾಸ ಮತ್ತು ಅವಧಾನಗಳಿಂದ ಭಾಷಾಂತರದ ಬಹುತೇಕ ಬಾಹ್ಯಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು.

	10 ಆಂತರಿಕ ಸಮಸ್ಯೆಗಳು: ಮುಖ್ಯವಾಗಿ ವ್ಯಕ್ತಿತ್ವ ಸಂಬಂಧ ಸಮಸ್ಯೆಗಳೆಂದು ಹೆಸರಿಸಲಾಗಿದೆ. ತನ್ನ ವ್ಯಕ್ತಿತ್ವವನ್ನು ಮೂಲಲೇಖಕನಿಗೆ ಶರಣಾಗಿಸಿ. ಆತನ ವ್ಯಕ್ತಿತ್ವದೊಂದಿದೆ ಏಕತೆ ಸಾಧಿಸಿದಾಗ, ಕೃತಿಯ ರಚನಾಕಾಲದಲ್ಲಿ ಮೂಲ ಲೇಖಕ ಹೊಂದಿದ್ದುzಕ್ಕೆ ಸದೃಶವೆನ್ನಬಹುದಾದ ಮನೋಭಾವ ಅಥವಾ ಮನಸ್ಥತಿ ಅನುವಾದಕನಲ್ಲಿಯೂ ಮೂಡುತ್ತದೆ. ಆಗ ಮೂಲದ ಜಾಡಿನಲ್ಲೇ ಅವನೂ ಮುಂದುವರಿಯುತ್ತಾನೆ. ಹೀಗೆ ಆಗಬೇಕಾದರೆ ಅನುವಾದಕ ತನ್ನ ವ್ಯಕ್ತಿತ್ವವನ್ನೂ ಅಮಾನತ್ತಿನಲ್ಲಿ ಇರಿಸಬೇಕಾಗುತ್ತದೆ. ಅನುವಾದಕನ ಅರ್ಹತೆಗಳನ್ನು ಕುರಿತು ಹೇಳುವಾಗ ಇದನ್ನೇ ಸ್ವನಿರಾಕರಣ ಮತ್ತು ಸ್ವಲೋಪನ ಎಂದು ಹೆಸರಿಸಲಾಗಿದೆ. ಹೀಗೆ ಆಗದೆ ಇದ್ದಾಗ ಎರಡು ಬಗೆಯ ಅಪಾಯಗಳು ಎದುರಾಗುತ್ತವೆ; (i) ಭಾಷಾಂತರಕಾರ ಮೂಲಲೇಖಕನ ವ್ಯಕ್ತಿತ್ವ, ಪ್ರತಿಭೆ ಮತ್ತು ಸಾಮಥ್ರ್ಯಗಳ ಎತ್ತರಕ್ಕೆ ಏರಲಾಗದೆ ಹೋಗುವುದು. (ii) ಭಾಷಾಂತರ ಕಾರನ ವ್ಯಕ್ತಿತ್ವ, ಪ್ರತಿಭೆ ಮತ್ತು ಸಾಮಥ್ರ್ಯಗಳು ಮೂಲಲೇಖಕನನ್ನು ಮೆಟ್ಟಿ ಮೇಲೇರಿ ನಿಲ್ಲುವುವು. ಅನುವಾದದ ದೃಷ್ಟಿಯಿಂದ ಈ ಎರಡು ಸ್ಥಿತಿಗಳೂ ಅನಪೇಕ್ಷಣೇಯವಾದವು. ಮೊದಲನೆಯ ಸ್ಥಿತಿ ಏರ್ಪಟ್ಟಾಗ ಭಾಷಾಂತರ ಒಂದಲ್ಲ ಒಂದು ಪ್ರಮಾನದಲ್ಲಿಯಾದರೂ ಮೂಲದ ಸತ್ತ್ವ ಶಕ್ತಿಗಳನ್ನು ಕಳೆದುಕೊಳ್ಳುತ್ತದೆ. ಇಂಥ ಭಾಷಾಂತರವನ್ನು ಅಧೋನುವಾದ (ಅಂಡರ್ ಟ್ರಾನ್‍ಸ್ಲೇಶನ್) ಎಂದು ಕರೆಯುತ್ತಾರೆ. ಭಾಷಾಂತರಕಾರನ ಅಸಾಮಥ್ರ್ಯದಿಂದ ಸೊರಗಿ ನಿಲ್ಲುವ ಅನುವಾದಗಳಿಗೆ ಈ ಮಾತು ಅನ್ವಯವಾಗುವುದಿಲ್ಲ. ಭಾಷಾಂತರಕಾರ ಸ್ವತಃ ಪ್ರತಿ ಭಾಷಾಲಿಯಾಗಿದ್ದರೂ ಭಾಷಾಸಂಬಂಧವಾದ ಅಥವಾ ಇತರ ಕೆಲವು ಕಾರಣಗಳಿಂದಾಗಿ ಮೂಲಕ್ಕೆ ಸದೃಶವಾದ ಭಾಷಾಂತರವನ್ನು ಕೊಡಲಾರದೆ ಹೋದಾಗ ಮಾತ್ರ ಅಂಥ ಅನುವಾದವನ್ನು ಅಧೋನುವಾದವೆನ್ನಲಾಗುತ್ತದೆ. ಅಧೋನವಾದಕ್ಕೆ ವಿರುದ್ಧವಾದುದು ಊಧ್ರ್ವಾನುವಾದ (ಓವರ್‍ಟ್ರಾನ್‍ಸ್ಲೇಶನ್) ಮೂಲವನ್ನು ಅನುವಾದ ಮೀರಿ ನಿಲ್ಲುವ ಪರಿಸ್ಥಿತಿ ಇದು. ಮೂಲಭಾವದ ಹಾದಿಯನ್ನೇ ಹಿಡಿದು ಆ ಭಾವವನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ಯುವುದನ್ನು ಇಲ್ಲಿ ಕಾಣಬಹುದು. ಆದರೆ ಮೂಲದಲ್ಲಿ ಸರಳವಾಗಿಸುವುದನ್ನೇ ಗಂಭೀರವಾಗಿಸುವುದು. ಅನುದಾತ್ತವಾಗಿರುವುದನ್ನು ಉದಾತ್ತವಾಗಿಸುವುದು. ಅನಲಂಕೃತವಾಗಿಸುವುದನ್ನು ಅಲಂಕೃತವಾಗಿಸುವುದು-ಈ ಬಗೆಯ ಕಾರ್ಯಗಳು ಊಧ್ರ್ವಾನುವಾದದ ವ್ಯಾಪ್ತಿಗೆ ಹೊರತಾಗುತ್ತವೆ, ಆಕ್ಷೇಪಾರ್ಹವೂ ಆಗುತ್ತವೆ. ಎಲ್ಲೊ ಒಂದು ಶಬ್ದವೋ ಒಂದು ಹೊಲಿಕೆಯೋ ಸೇರಿಕೊಂಡು ಮೂಲದ ಭಾವನೆಯನ್ನು ಮತ್ತಷ್ಟು ತೀವ್ರವೊ ಪರಿಣಾಮಕಾರಿಯೂ ಆಗಿಸಿದರೆ ಆಗ ಅದು ಊಧ್ರ್ವಾನುವಾದವೆನಿಸಿಕೊಳ್ಳುತ್ತದೆ.

	ಲೇಖಕನ ಶೀಲದ ಪ್ರತೀಕವಾಗಿರುವ ಶೈಲಿಯೂ ಭಾಷಾಂತರದಲ್ಲಿ ಕೆಲವು ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಮೂಲದ ಶೈಲಿಯ ವೈಶಿಷ್ಟ್ಯಗಳು ಭಾಷಾಂತರದಲ್ಲಿ ಕಾಣಿಸುವಂತಾಗಬೇಕೆಂದು ಉದ್ದಿಷ್ಟ ಭಾಷೆಯ ಜಾಯಮಾನಕ್ಕೆ ಒಗ್ಗದಂಥ ಕೃತಕ ರಚನೆಗಳನ್ನು ತಂದು ಗಿಡಿಯುವುದು ಸಲ್ಲದು. ಅದರ ಜಾಯ ಮಾನ ಮತ್ತು ಧಾರಣ ಶಕ್ತಿ ಅನುಮತಿಸುಷ್ಟರ ಮಟ್ಟಿಗೆ ಮೂಲದ ಶೈಲಿಯ ವೈಶಿಷ್ಟ್ಯಗಳನ್ನು ಅಳವಡಿಸಿಕೊಳ್ಳಬೇಕು, ಸಹಜ ಸ್ಫೂರ್ತಿಯಿಂದ ನಡೆದ ಅನುವಾದದಲ್ಲಿ ಮೂಲದ ವೈಶಿಷ್ಟ್ಯಗಳನ್ನು ಸಾಧ್ಯವಿದ್ದಷ್ಟುಮಟ್ಟಿಗೂ ಅಳವಡಿಸಿಕೊಂಡಿರುವಂಥ ವಿಶಿಷ್ಟ ಶೈಲಿಯೊಂದು ಮೂಡಿಯೇ ಇರುತ್ತದೆಂಬುದನ್ನೂ ನೆನಪಿನಲ್ಲಿಡಬೇಕು.

	11 ಕಾವ್ಯಾನುವಾದದ ವಿಶಿಷ್ಟ ಸಮಸ್ಯೆಗಳು: ಕಾವ್ಯವನ್ನು ಭಾಷಾಂತರಿಸಲು ಸಾಧ್ಯವಿಲ್ಲ. ಹೀಗೇನಾದರೂ ಭಾಷಾಂತರಿಸಿದರೆ ಅಥವಾ ಭಾಷಾಂತರಿಸಲು ಸಾಧ್ಯವಾದರೆ ಅದು ತನ್ನ ಮೂಲದ ಸತ್ತ್ವ ಸೌಂದರ್ಯಗಳನ್ನು ಕಳೆದುಕೊಂಡಿರುತ್ತದೆ. ಈ ಅಭಿಪ್ರಾಯದ ಮಾತುಗಳು ಕಾವ್ಯಾನುವಾದದ ಅಸಾಧ್ಯತೆ ಹಾಗೂ ಅನಪೇಕ್ಷಣೀಯತೆಯನ್ನು ಶ್ರುತಪಡಿಸುತ್ತವೆ. ಇಷ್ಟಾಗಿಯೂ ಕಾವ್ಯದ ಅನುವಾದ ಸತತವಾಗಿ ಹಾಗೂ ತೃಪ್ತಿಕರವಾಗಿ ನಡೆಯುತ್ತ ಬಂದಿದೆ ಎಂಬುದಕ್ಕೆ ಜೀವಂತ ಭಾಷೆಗಳ ಸಾಹಿತ್ಯೇತಿಹಾಸಗಳು ಸಾಕ್ಷಿ ಒದಗಿಸುತ್ತವೆ. ಕಾವ್ಯದ ತೃಪ್ತಿಕರ ಅನುವಾದ ನಷ್ಟಸಾಧ್ಯವಾದರೂ ಅಸಾಧ್ಯವಾದುದೇನಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

	ಕಾವ್ಯಾನವಾದ ಇಷ್ಟೊಂದು ವಿವಾದಕ್ಕೆ ಕಾರಣವಾಗಿರುವುದು ಅದರಲ್ಲಿ ನಿಹಿತವಾಗಿರುವ ಹಲವಾರು ಸಮಸ್ಯೆಗಳಿಂದ ಮೂಲಭೂತವಾಗಿ ಅದರಲ್ಲಿ ಇರುವುದು ಕೈಗೆ ಸಿಕ್ಕದ, ಸಿಕ್ಕಿದರೂ ನುಣುಚಿಕೊಳ್ಳುವ ಭಾವಸಂಪತ್ತು; ಇದಕ್ಕೆ ಪೋಷಕವಾಗಿಯೂ ಪೂರಕವಾಗಿಯೂ ಬಂದಿರುವ ಲಯಪ್ರಾಸ, ಅಲಂಕಾರಾದಿಗಳು; ಈ ಎಲ್ಲದರ ನೆರವಿನಿಂದ ಕವಿಕಂಡ ವಿಶಿಷ್ಟ ಕಾಣ್ಕೆ; ಇವನ್ನು ನೆಮ್ಮಿನಿಂತಿರುವ ವಿಶಿಷ್ಟ ಕಲ್ಪನೆ. ಇಷ್ಟೊಂದು ಸಮಸ್ಯೆಗಳಿವೆಯೆಂಬ ವಿಚಾರ ನಮ್ಮನ್ನು ಎದೆಗೆಡಿಸಬೇಕಾಗಿಲ್ಲ. ಏಕೆಂದರೆ ಅನಾತೋಲೆ ಫ್ರಾನ್ಸ್ ಹೇಳಿರುವಂತೆ ಈ ಸತ್ಯವನ್ನು ಕಂಡುಕೊಳ್ಳುವುದೇ ಈ ಕಲೆಯಲ್ಲಿಯ ಯಶಸ್ಸಿಗೆ ಪೂರ್ವಭಾವೀ ಅಗತ್ಯ.' ಹಾಗೆ ಕಂಡುಕೊಂಡ ಬಳಿಕ ಪ್ರಾಮಾಣಿಕ ಪ್ರಯತ್ನದ ಮೂಲಕ ಉತ್ತಮ ಅನುವಾದವನ್ನು ಕೊಡಲು ಸಾಧ್ಯವಾಗುತ್ತದೆ.

	ಮೂಲದ ಭಾವಗಳು ಮೂರ್ತವೂ ಸರಳವೂ ಆಗಿರುವಾಗ ಭಾಷಾಂತವೂ ಸರಳಸುಂದರವಾಗಿರುವುದು ಸಾಧ್ಯ. ಆದರೆ ಕಾವ್ಯ ಎಲ್ಲೆಡೆಗಳಲ್ಲಿಯೂ ಮೂರ್ತವೂ ಸರಳವೂ ಆಗಿರುವುದಿಲ್ಲ. ಅಂತೆಯೇ ನಾದ ಮತ್ತು ಲಯಗಳು ಆಂತರಿಕವಾಗಿ ವಿಸ್ತರಿಸಿಕೊಂಡಿರುವಂಥವು ಪ್ರಾಸ ಆದಿ, ಮಧ್ಯ ಮತ್ತು ಅಂತ್ಯದಲ್ಲಿ ಕಾಣಿಸಿಕೊಳ್ಳುವಂಥವು ಇದು ಪ್ರಯತ್ನಪೂರ್ವಕವಾಗಿಯೋ ಸಿದ್ಧಿಸಿರಬಹುದಾದದ್ದು. ಇದನ್ನು ಯಥಾವತ್ತಾಗಿ ತರಲು ಸಾಧ್ಯವಾಗದೆ ಹೋಗಬಹುದಾದರೂ ಭಾಷಾಂತರ ತನ್ನದೇ ಆದ ನಾದ, ಲಯ ಮತ್ತು ಪ್ರಾಸ ವಿನ್ಯಾಸವ್ನನ್ನು ಮೂಡಿಸಿಕೊಳ್ಳಬಹುದು. ಕ್ವಚಿತ್ತಾಗಿ ಮೂಲಕ್ಕೆ ಸರಿದೊರೆಯಾಗಿ ಇವನ್ನು ಅವತರಿಸಿಕೊಳ್ಳುವ ಅದ್ಭುತಕಾರ್ಯವನ್ನು ನಿರ್ವಹಿಸಿರುವ ನಿದರ್ಶನಗಳೂ ಇವೆ. ಕಾಳಿದಾಸನ ಶಾಕುಂತಲ ನಾಟಕದ ಅನುವಾದದಲ್ಲಿ ಬಸವಪ್ಪಶಾಸ್ತ್ರಿಗಳೂ ಮೇಘದೂತದ ಅನುವಾದದಲ್ಲಿ ಬೇಂದ್ರೆಯವರೂ ಇಂಥ ಸಾಧನೆಗಳನ್ನು ಮೆರೆದಿದ್ದಾರೆ.

	ಕಾವ್ಯದ ಭಾಷಾಂತರದಲ್ಲಿ ಅಗತ್ಯವಾಗಿ ಇರಲೇಬೇಕಾದ ಅಂಶಗಳು ನಾಲ್ಕು: (i) ಯಥಾರ್ಥತೆ; (ii) ವಾಚನೀಯತೆ, (iii) ಶೈಲಿ ಮತ್ತು (iv) ಅವಧಾರಣೆ. ಭಾಷಾಂತರವನ್ನು ತಪ್ಪಾಗಿ ಮಾಡಬಾರದೆಂಬ ಅರ್ಥದಲ್ಲಿ ಮಾತ್ರವಲ್ಲದೆ ಲೇಖಕ ಕಲ್ಪಸಿಕೊಳ್ಳದೆಯೂ ಇರುವಂಥ ಅಸಂಬದ್ಧ ವಿಚಾರಗಳನ್ನೆಲ್ಲ ಆತನಿಗೆ ಆರೋಪಿಸಲು ಹೋಗಬಾರದೆಂಬುದನ್ನು ಸೂಚಿಸಲು ಯಥಾರ್ಥತೆ ಎಂಬ ಮಾತನ್ನು ಬಳಸಲಾಗಿದೆ. ಛಂದಸ್ಸು ಪ್ರಾಸ ಮತ್ತು ಲಾಲಿತ್ಯಾದಿ ವೈಶಿಷ್ಟ್ಯಗಳು ಅನುಷಂಗಿಕವಾಗಿ ಮೈಗೂಡಿಕೊಳ್ಳಬೇಕಾದಂಥವು ಎಂಬುದನ್ನು ಈ ಅಂಶ ಒತ್ತಿಹೇಳುತ್ತದೆ.. ಮೂಲದಲ್ಲಿ ಇರುವುದನ್ನು ಬಿಡುವುದು, ಇಲ್ಲದುದನ್ನು ಸೇರಿಸುವುದು, ತಮಗೆ ತೋಚಿದಂತೆ ಅರ್ಥೈಸುವುದು, ತಮ್ಮ ಪ್ರತಿಭಾವಿಹಾರಕ್ಕೆ ಅವಕಾಶ ಕಲ್ಪಿಸಿಕೊಳ್ಳುವುದು. ಮೂಲಕ್ಕೆ ಯಾವುದೇ ರೀತಿಯಲ್ಲೂ ಹೊಂದದಿರುವಂಥ ಛಂದಸ್ಸನ್ನಿರಿಸಿಕೊಂಡು ಪಾದಪೂರಣಕ್ಕಾಗಿ ಸಲ್ಲದ ವಿಚಾರಗಳನ್ನು ಸೇರಿಸುತ್ತ ಹೋಗುವುದು-ಇವೆಲ್ಲ ನಿಂದ್ಯವಾಗುತ್ತವೆಂಬುದನ್ನು ಈ ಸಂದರ್ಭದಲ್ಲಿ ಒತ್ತಿಹೇಳಲಾಗಿದೆ. ಅಂತೆಯೇ ವಾಚನೀಯತೆಯನ್ನು ಎರಡನೆಯ ಮುಖ್ಯಾಂಶವಾಗಿ ಹೆಸರಿಸಲಾಗಿದೆ. ಕಾರಣ ಎಷ್ಟೇ ಯಥಾವತ್ತಾಗಿ ಮತ್ತು ವಿದ್ವತ್ಪೂರ್ಣವಾಗಿ ಭಾಷಾಂತರಿಸಿದರೂ ಭಾಷಾಂತರ ಯಶಸ್ವಿಯಾಗುವುದು ವಾಚನೀಯತೆ ಸಾಧಿತವಾದಾಗಲೇ, ಓದುಗ ಮುಖತಿರುಗಿಸಿಕೊಂಡು ಹೋಗುವಂತಾದರೆ ಉಳಿದ ಗುಣಗಳೇನೇ ಇರಲಿ ಭಾಷಾಂತರ ಅಸಫಲವಾದಂತೆಯೇ. ಭಾಷಾಂತರಕಾರನ ವಿದ್ವತ್ತು ಸಾಮಥ್ರ್ಯಗಳು ಮೂಲವನ್ನು ಮತ್ತಷ್ಟು ಪೆಡಸಾಗಿಸಲು ವಿನಿಯೋಗವಾಗಬಾರದು. ಬದಲಾಗಿ ಲಾಲಿತ್ಯಕ್ಕೂ ಸರಳತೆಗೂ ಅನುವಾಗಿ ಬರಬೇಕು. ಬ್ರೌನಿಂಗನ ಪೈಡ್ ಪೈಪರ್ ಆಫ್ ಹ್ಯಾಮಿಲಾನ್‍ನ ರೂಪಾಂತರವಾದ ಕುವೆಂಪು ಅವರ ಬೊಮ್ಮನಹಳ್ಳಿಯ ಕಿಂದರಿಜೋಗಿ ಅತ್ಯುತ್ತಮವಾಚನೀಯತೆಯನ್ನು ಹೊಂದಿರುವುದು. ಅದರ ಯಶಸ್ಸಿಗೆ ಕಾರಣ. ಇದಕ್ಕೆ ವ್ಯತಿರಿಕ್ತವಾಗಿ ಸಂಧಿ ಸಮಾಸಗಳ ಬಾಹುಳ್ಯದಿಂದ ಮತ್ತು ಕ್ಲಿಷ್ಟ ಶಬ್ದಗಳ ಬಳಕೆಯಿಂದ ಮೂಲದ ಸರಳತೆ ಮತ್ತು ವಾಚನೀಯತೆ ಸಮಾಧಿಯಾಗಿ ಹೋಗುವಂತೆ ಮಾಡಿರುವ ನಿದರ್ಶನಗಳೂ ಇವೆ. ಅಂತೆಯೇ ಮೂಲಲೇಖಕ ಉದ್ದೇಶಪೂರ್ವಕವಾಗಿ ಶೈಲಿಯ ವೈವಿಧ್ಯವನ್ನು ಮೆರೆಯಲು ಗಂಭೀರವಾಗಿ, ಉದಾತ್ತವಾಗಿ, ಸಮಾಸ ಭೂಯಿಷ್ಠವಾಗಿ ಇರುವಂತೆ ರಚನೆ ಮಾಡಿದ್ದಾಗ ಅದನ್ನು ಸರಳ ಸುಲಭ ಲಲಿತವಾಗುವಂತೆ ಮಾಡುವುದು ನಿಂದ್ಯವಾಗುತ್ತದೆ. ಶೈಲಿ ಮೂರನೆಯ ಮುಖ್ಯವಿಚಾರ. ಕವಿಯ ವ್ಯಕ್ತಿತ್ವದ ಪ್ರತೀಕವಾಗಿಯೇ ಭಾಷಾಂತರವೂ ಉಳಿದುಕೊಳ್ಳಬೇಕಾದಲ್ಲಿ ಶೈಲಿಯಲ್ಲಿ ಕಾಯ್ದುಕೊಳ್ಳುವುದು ಅಗತ್ಯವಾಗುತ್ತದೆ. ಸೂಕ್ಷ್ಮಸಂವೇದನೆ ಇರುವ ಅನುವಾದಕ ಈ ವಿಚಾರದತ್ತ ಗಮನಕೊಟ್ಟೇ ತೀರುತ್ತಾನೆ. ಈ ದೃಷ್ಟಿಯಿಂದ ಪದ್ಯಾನುವಾದ ಕವಿಯ ಮನೋಧರ್ಮಕ್ಕೆ ಸಮೀಪವಾಗಿರುವ ಸಂಭವ ಅಧಿಕ. ಗದ್ಯಾನುವಾದ ಸಹಜವಾಗಿಯೇ ಈ ವಿಚಾರದಲ್ಲಿ ಕೊಂಚ ದೂರ ಸರಿದಿರುತ್ತದೆ. ಅವಧಾರಣೆ ಅಥವಾ ಒತ್ತು ನಾಲ್ಕನೆಯ ಮುಖ್ಯಾಂಶ. ಅನೇಕ ವೇಳೆ ಕವಿ ಆಯುವ ಛಂದಸ್ಸು, ಅದರ ಲಯ, ಪ್ರಾಸಾನುಪ್ರಾಸಗಳು, ಶಬ್ದಸ್ಥಾನ ನಿರ್ಧಾರಣ ಇವುಗಳಲೆಲ್ಲ ಆತನ ಅವಧಾರಣಿನಿಹಿತವಾಗಿರುತ್ತದೆ. ಅನುವಾದಕ ಸೂಕ್ಷ್ಮ ಸಂವೇದಿಯಾಗಿದ್ದಲ್ಲಿ ಇಂಥ ಎಡೆಗಳನ್ನು ಗುರುತಿಸಬಲ್ಲ. ಕೆಲವೊಮ್ಮೆ ಇಡೀ ಪಂಕ್ತಿಯ ಅಥವಾ ಪದ್ಯದ ಭಾವತೀವ್ರತೆ ಒಂದೆರಡು ಶಬ್ಚಗಳಲ್ಲಿಯೇ ಕೇಂದ್ರೀಕೃತವಾಗಿರಬಹುದು. ಅವನ್ನು ಅಷ್ಟೇ ಧ್ವನಿಪೂರ್ಣವಾಗಿ ಅಳವಡಿಸಿಕೊಳ್ಳುವುದರಲ್ಲಿ ಭಾಷಾಂತರಕಾರನ ಯಶಸ್ಸು ಅಡಗಿರುತ್ತದೆ.  

	ಕಾವ್ಯವನ್ನು ಪದ್ಯರೂಪದಲ್ಲಿ ಅನುವಾದಿಸಬೇಕೆ ಅಥವಾ ಗದ್ಯರೂಪದಲ್ಲಿಯೇ ಅನುವಾದಿಸಬೇಕೆ ಎಂಬುದೂ ಮುಖ್ಯ ಸಂಗತಿ. ಛಂದಸ್ಸು ಕಾವ್ಯದ ಅನಿವಾರ್ಯ ಅಂಗವಲ್ಲವೆಂಬ ಭಾವನೆ ಇಂದು ಪ್ರಬಲವಾಗಿದ್ದರೂ ಕಾವ್ಯ ತನ್ನದೇ ಆದ ಆಂತರಿಕ ಲಯದಿಂದ ವಾಚಕರ ಗಮನಸೆಳೆಯುತ್ತದೆ. ಗದ್ಯದಲ್ಲೂ ಇಂಥ ಆಂತರಿಕ ಲಯ ಇರಬಹುದಾದರೂ ಇಲ್ಲಿ ಅದು ಕಾವ್ಯದಲ್ಲಿಯಂತೆ ಎದ್ದು ಕಾಣುವುದಿಲ್ಲ. ಛಂದಸ್ಸಿನಿಂದ ಕಾವ್ಯಕ್ಕೆ ಕೆಲವೊಂದು ಸೌಕರ್ಯಗಳು ಲಭಿಸುತ್ತವೆಂಬುದೇನೋ ನಿಜ-ನದಿಯ ಪ್ರವಾಹಕ್ಕೆ ದಡಗಳು ಅಗತ್ಯವಾಗಿರುವಂತೆ, ಭಾವಪ್ರವಾಹಕ್ಕೆ ಛಂದಸ್ಸು ಚೌಕಟ್ಟನ್ನೂ ತೀವ್ರತೆಯನ್ನು ಒದಗಿಸುತ್ತದೆ. ಉಕ್ತಿಗೆಂತೋ ಅನುಕ್ತಿಗೂ ಅಂತೆ ಕಾವ್ಯದಲ್ಲಿ ಎಡೆ ಇರುವುದರಿಂದ ಪದ್ಯಾನುವಾದದಲ್ಲಿ ಅನುಕ್ತಿಯನ್ನು ಉಳಿಸಿಕೊಳ್ಳುವುದು ಸಾಧ್ಯ. ಆದರೆ ಗದ್ಯದಲಿ ಅನುಕ್ತಿಯ ಎಡೆಗಳನ್ನು ತುಂಬಬೇಕಾಗುತ್ತದೆ. ಭಾವವಿರಣೆಗೂ ವಿಶದೀಕರಣಕ್ಕೂ ಕೈಹಾಕಬೇಕಾಗುತ್ತದೆ, ಹೀಗಾಗಿ ಮೂಲದ ಹಿತಮಿತತ್ವ ಸೌಂದರ್ಯ ಗಾಂಭೀರ್ಯಗಳ ಪ್ರಮಾಣ ಗದ್ಯಾನುವಾದದಲ್ಲಿ ಕಡಿಮೆಯಾಗುತ್ತದೆ. ಕಾವ್ಯ ಇರುವುದು ಸುಕುಮಾರ ಸಹೃದಯರಿಗಾಗಿ; ಗದ್ಯರಚಿತವಾಗುವುದು ಆ ಎತ್ತರಕ್ಕೆ ಏರಲಾರದ ಸಾಧರಣ ಓದುಗರಿಗಾಗಿ; ಹೀಗೆಲ್ಲ ವಾದಿಸಲಾಗಿದೆ ಯಾದರೂ ಪದ್ಯಾನುವಾದಗಳನ್ನು ಮೀರಿ ಗದ್ಯಾನುವಾದಗಳು ಹೆಚ್ಚು ಹೆಚ್ಚು ಜನಪ್ರಿಯವಾಗಿರುವ ನಿದರ್ಶನಗಳನ್ನು ಸಾಹಿತ್ಯಲೋಕ ಒದಗಿಸಿದೆ.

	ಕೊನೆಯದಾಗಿ ಕಾವ್ಯವನ್ನು ಕವಿಯೇ ಅನುವಾದಿಸಬೇಕೆ ಕವಿಯಲ್ಲದವನೂ ಅನುವಾದಿಸಬಹುದೆ ಅಥವಾ ಕವಿಯಲ್ಲದವನೇ ಅನುವಾದಿಸಬೇಕೆ ಎಂಬ ಪ್ರಶ್ನೆಯನ್ನು ಪರಿಗಣಿಸಬಹುದು. 'ಕವಿಗೆ ಮತ್ತೊಬ್ಬ ಕವಿಯೇ ಅತ್ಯತ್ತಮ ಭಾಷಾಂತರಕಾರನಾಗಬಲ್ಲ. ಕವಿ ಪಡೆಯಬಹುದಾದ ಭಾಷಾಂತರಕಾರರಲ್ಲಿ ಅತ್ಯಧಮನೆಂದರೆ ಮತ್ತೊಬ್ಬ ಕವಿಯೇ ಎಂದೆಲ್ಲ ಹೇಳಲಾಗಿದೆ. ಅತ್ಯುತ್ತಮ ಅನುವಾದಗಳನ್ನು ಕೊಟ್ಟಿರುವ ಕವಿಗಳೂ ಅತ್ಯಂತ ಅಸಮರ್ಪಕ ಅನುವಾದಗಳನ್ನು ಕೊಟ್ಟಿರುವ ಕವಿಗಳೂ ಇರುವುದರಿಂದಲೇ ಅಂಥ ಹೇಳಿಕೆಗಳು ಹುಟ್ಟಿಕೊಂಡಿವೆ. ಸ್ವತಃ ಕವಿಯಾದವನು ಸಂವೇದನಾಶೀಲನಾಗಿರುತ್ತಾನೆ; ವಶ್ಯವಾಕ್ ಆಗಿರುತ್ತಾನೆ; ಭಾಷೆ ಮತ್ತು ಅಭಿವ್ಯಕ್ತಿಯಮೇಲೆ ಪ್ರಭುತ್ವ ಹೊಂದಿರುತ್ತಾನೆ. ಅತ್ಯಂತ ಸಹೃದಯತೆಯಿಂದ ಮತ್ತೊಬ್ಬ ಕವಿಯನ್ನು ಅನುವಾದಿಸುತ್ತಾನೆ; ಇನ್ನೊಬ್ಬರು ತನ್ನ ಕೃತಿಗೆ ಮತ್ತು ಕೃತಿಯಲ್ಲಿಯ ಭಾವಗಳಿಗೆ ಹಿಂಸೆ ಉಂಟು ಮಾಡಿದರೆ ತಾನು ಹೇಗೆ ನೊಂದುಕೊಳ್ಳುತ್ತಿದ್ದೇನೆಂಬುದನ್ನು ಅರಿತು ತುಂಬ ಎಚ್ಚರಿಕೆಯಿಂದ ಭಾವಗಳ ಅವತರಣವನ್ನು ಸಮರ್ಪಕ ರೀತಿಯಲ್ಲಿ ಸಾಧಿಸುತ್ತಾನೆ-ಇವು ಕವಿಯ ಪರವಾಗಿ ಹೇಳಲಾಗುವ ಮಾತುಗಳು. ಆದರೆ ಕವಿ ತನ್ನ ನೆರಳನ್ನು ತಾನು ಮೀರಿ ನಿಲ್ಲಲಾರ, ತಾನೇನು ಕಡಿಮೆ ಎಂಬ ಅಹಂಭಾವ ಅವನಲ್ಲಿ ಮನೆ ಮಾಡಿಕೊಂಡಿರುತ್ತದೆ; ಕವಿಯಲ್ಲದವನು ಕವಿಯನ್ನು ಅಭ್ಯಸಿಸುವಾಗ ಪ್ರದರ್ಶಿಸುವ ವಿನಯ ಸಹೃದಯತೆಗಳನ್ನು ಕವಿ ಇನ್ನೊಬ್ಬ ಕವಿಯನ್ನು ಅಭ್ಯಸಿಸುವಾಗ ಪ್ರದರ್ಶಿಸಲಾರ, ಇದೇ ಭಾವವನ್ನು ಮತ್ತಷ್ಟು ಸುಂದರವಾಗಿಯೂ ಪರಿಣಾಮಕಾರಿಯಾಗಿಯೂ ಹೇಳಬಹುದಾಗಿತ್ತೆಂದು ಭಾವಿಸಿ ಅದನ್ನು ಪರಿಷ್ಕರುಸುವ ಪ್ರಲೋಭನೆಯನ್ನು ಈತ ಮೆಟ್ಟಿ ನಿಲ್ಲಲಾರ; ಹೀಗಾಗಿ ಕವಿಗೆ ಇನ್ನೊಬ್ಬ ಕವಿ ಎಂದಿಗೂ ಉತ್ತಮ ಭಾಷಾಂತರಕಾರನಾಗಲಾರ ಎಂದು ಕವಿಗೆ ವಿರುದ್ಧವಾಗಿ ಹೇಳಲಾಗಿದೆ.

	ಈ ಎರಡು ವಾದಗಳಲ್ಲಿಯೂ ತಿರುಳಿಲ್ಲದೆ ಇಲ್ಲ. ಕವಿಯಾದವ ತನ್ನ 'ಅಹಂ' ಅನ್ನು ಮೆಟ್ಟಿ ನಿಂತು ತನ್ನ ಪ್ರತಿಭೆ ವ್ಯುತ್ಪತ್ತಿಗಳೆಲ್ಲವನ್ನೂ ಮೂಲ ಕವಿಗೆ ಅರ್ಪಿಸಿಕೊಂಡರೆ ಆಗ ಆತ ನಿಜಕ್ಕೂ ಉತ್ತಮ ಭಾಷಾಂತರ ಕೊಡಬಲ್ಲ. ಈ ತಾದಾತ್ಮ್ಯ ಮತ್ತು ಸ್ವನಿರಾಕರಣ ಸಾಧ್ಯವಾಗದೆ ಹೋದರೆ ಆತ ಇತರ ಭಾಷಾಂತರಕಾರರಿಗಿಂತ ಯಾವ ವಿಧದಲ್ಲೂ ಉತ್ತಮನಾಗಲು ಸಾಧ್ಯವಿಲ್ಲ. ಕವಿ ಪಟ್ಟಕ್ಕೆ ಏರದ, ಆದರೆ ಸಹೃದಯತೆಯಲ್ಲಿ ಅಧ್ಯಯನ ಅಭ್ಯಾಸ ವ್ಯುತ್ಪತ್ತಿಗಳಲ್ಲಿ ಯಾರಿಗೂ ಕಡಿಮೆಯಲ್ಲದ ವ್ಯಕ್ತಿ ಬೇರಾರಿಗಿಂತಲೂ ಉತ್ತಮವಾದ ಅನುವಾದವನ್ನು ಕೊಡುವ ಸಾಧ್ಯತೆಯುಂಟು.

	12 ವಿಜ್ಞಾನ ಮಾನವಿಕ ಮತ್ತು ತಾಂತ್ರಿಕ ಕೃತಿಗಳ ಭಾಷಾಂತರ: ಸಾಹಿತ್ಯದಂತೆ ವಿಜ್ಞಾನ ತಂತ್ರವಿದ್ಯೆ ಮತ್ತು ಮಾನವಿಕಶಾಸ್ತ್ರಗಳು ಕೂಡ ಆಧುನಿಕ ಜೀವನದ ಅವಿಭಾಜ್ಯ ಅಂಗಗಳಾಗಿವೆ. ವಿಜ್ಞಾನ ಮತ್ತು ತಂತ್ರ ವಿದ್ಯೆ ಹಾಗೂ ಮಾನಸಿಕ ಕ್ಷೇತ್ರಗಳಲ್ಲಿ ಇಂದು ಭಾಷಾಂತರಕಾರ್ಯ ನೆಡೆಯುತ್ತಿರುವ ಮಿಶ್ರಭಾಷೆಗಳ ನಡುವೆ-ಅಂದರೆ ಇಂಗ್ಲಿಷ್-ಕನ್ನಡ, ರಷ್ಯನ್ ((ಇಂಗ್ಲಿಷ್)-ಕನ್ನಡ ಇತ್ಯಾದಿ. ಪ್ರಧಾನವಾಗಿ ಎದುರಾಗುವ ಸಮಸ್ಯಗಳು ಮೂರು; ವಸ್ತು, ಭಾಷೆ ಮತ್ತು ಪರಿಭಾಷೆ ಈ ದೃಷ್ಟಿಯಲ್ಲಿ ಈ ಕ್ಷೇತ್ರದ ಭಾಷಾಂತರಕಾರರಲ್ಲಿ ಮೂರುವರ್ಗದ ಭಾಷಾಂತರಕಾರರಿದ್ದಾರೆ: (i) ಭಾಷೆ ಮತ್ತು ವಿಷಯದ ಮೇಲೆ ಸಮಾನಪ್ರಭುತ್ವ ಹೊಂದಿರುವವರು: (ii) ವಿಷಯದ ಮೇಲೆ ಪ್ರಭುತ್ವ ಹೊಂದಿದ್ದರೂ ಭಾಷೆಯ ಮೇಲೆ ಹೆಚ್ಚಿನ ಪ್ರಭುತ್ವ ಇಲ್ಲದಿರುವವರು; ಮತ್ತು (iii) ಭಾಷೆಯ ಮೇಲೆ ಕಿಂಚಿತ್ ಪ್ರಭುತ್ವಹೊಂದಿದ್ದು ವಿಷಯದ ಪೂರ್ಣ ಪರಿಜ್ಞಾನ ಇಲ್ಲದಿರುವವರು. ಮೊದಲನೆಯ ವರ್ಗದವರು ಉತ್ತಮ ಭಾಷಾಂತರ ಕೊಡಬಲ್ಲವರು; ಎರಡನೆಯ ವರ್ಗದವರು ಮಧ್ಯಮ ದರ್ಜೆಯ ಭಾಷಾಂತರ ಕೊಡಬಲ್ಲವರು; ಮೂರನೆಯ ವರ್ಗದವರು ಅಧಮ ಭಾಷಾಂತರ ಕೊಡುವ ಅನಧಿಕಾರಿಗಳು.

	ವಿಜ್ಞಾನ, ತಂತ್ರವಿದ್ಯೆ ಮತ್ತು ಮಾನವಿಕ ಕ್ಷೇತ್ರಗಳಲ್ಲಿ ಬಳಸಲಾಗುವ ಶಬ್ದಗಳಿಗೆ ಮತ್ತು ವಾಕ್ಯರಚನೆಗಳಿಗೆ ತಮ್ಮದೇ ಆದ ವಿಶಿಷ್ಟ ಲಕ್ಷಣಗಳಿವೆ ಈ ವಿಶಿಷ್ಟ ಅರ್ಥಸಂಪನ್ನತೆ ಶಬ್ದಗಳಿಗೆ ಪಾರಿಭಾಷಿಕ ಸ್ವರೂಪ ತಂದುಕೊಡುತ್ತದೆ. ಅಂದರೆ ಆಯಾ ಶಾಸ್ತ್ರ ಅಥವಾ ವಿಜ್ಞಾನದ ಸಂದರ್ಭದಲ್ಲಿ ಮಾತುಗಳು ಆಯಾ ವಿಶಿಷ್ಟ ಅರ್ಥದಲ್ಲಿ ಬಳಕೆಯಾಗುತ್ತವೆ. ದೈನಂದಿನ ಬಳಕೆಯ ಶಬ್ದಗಳಿಗೆ ವಿಶೇಷ ಅರ್ಥ ಕೊಟ್ಟು ಅಥವಾ ಎರವಲು ತಂದು, ಅಥವಾ ಹೊಸ ಶಬ್ದವನ್ನು ಉದ್ದೇಶಪೂರ್ವಕವಾಗಿ ಟಂಕಿಸಿ ಬಳಕೆಗೆ ತರಲಾಗುವಂಥ ಶಬ್ದಗಳು ಇವು. ಈ ಕ್ಷೇತ್ರಕ್ಕೆ ಪ್ರವೇಶವಿರದ ವ್ಯಕ್ತಿಗೆ ಇವು ಯಾವುದೇ ಅರ್ಥವನ್ನೂ ಸಂವಹನಿಸದೆ ಹೋಗಬಹುದು. ಅಂತೆಯೇ ಪಾರಿಭಾಷಿಕತೆಯ ಈ ಆವರಣವನ್ನು ಒಮ್ಮೆ ಭೇದಿಸಿದರೆ ಆ ಶಬ್ದ ಸಂಕೇತಿಸುವ ಕ್ರಿಯೆ-ಪ್ರಕ್ರಿಯೆಗಳೆಲ್ಲ ಸುಲಭ ಪರಿಚಿತವಾಗುತ್ತದೆ. ಈ ಶಬ್ದಗಳು ಬಲುಮಟ್ಟಿಗೆ ಸಂಕ್ಷೀಪ್ತವಾಗಿರುತ್ತದೆ. ಅನಿವಾರ್ಯವಾಗಿ ದೀರ್ಘವಾದಗ ಇವುಗಳ ಸಂಕೇತಗಳು ಅಥವಾ ಸಂಕ್ಷಿಪ್ತಗಳು ವ್ಯಾವಹಾರಿಕ ಪರ್ಯಾಯಗಳಾಗಿ ಬಳಕೆಗೆ ಬರುತ್ತವೆ. ಆದ್ದರಿಂದ ಪಾರಿಭಾಷಿಕೆ ಶಬ್ದ ಸಂಪತ್ತು ಪೂರ್ವಸಿದ್ದ ಸಾವiಗ್ರಿಯಲ್ಲ. ಅಗತ್ಯಾಗುಣವಾಗಿ ಬೆಳೆದು ದೊರೆಯುವ ವಸ್ತು ಎಂಬುದು ಸ್ಪಷ್ಟ. ಅಂದರೆ ಅಗತ್ಯ ಪರಿಸರ ಉಂಟಾದಗ ವೈಜ್ಞಾನಿಕ ಚಿಂತನ, ಮಂಥನ ಮತ್ತು ಅಭಿವ್ಯಕ್ತಿಗಳು ಆಯಾ ಭಾಷೆಯಲ್ಲಿಯೇ ನಡೆದಾಗ, ಒಟ್ಟಿನಲ್ಲಿ ಭಾಷೆಯನ್ನು ವಿಶಿಷ್ಟ ವಿಜ್ಞಾನಾದಿ ಶಾಖೆಗಳಿಗೆ ಸಂದರ್ಭಾನುಗುಣವಾಗಿ ಕಸಿಮಾಡಿದಾಗ ಬೆಳೆದುಬರುವಂಥದು.

	ಇಂಗ್ಲಿಷಿನಲ್ಲಿ ದಿನಬಳಕೆಯ ಶಬ್ದಗಳನ್ನು ಬಳಸಿಕೊಂಡು (ಉದಾಹರಣೆಗೆ ಣesಣ, ಜಿoಡಿಛಿe, eಟಿeಡಿgಥಿ, ಇತ್ಯಾದಿ), ಎರವಲು ಪಡೆದು (ಉದಾಹರಣೆಗೆ ಜಿuಟಛಿಡಿum, ಟಚಿಡಿvಚಿ, sಠಿuಣಟಿiಞ ಇತ್ಯಾದಿ) ಗ್ರಿಕ್ ಮ್ತು ಲ್ಯಾಟಿನ್ ಶಬ್ದಕಾಂಡಗಳನ್ನು ಬಳಸಿ ಹೊಸ ಶಬ್ದಗಳನ್ನು ಸೃಷ್ಟಿಸಿಕೊಂಡು (ಉದಾಹರಣೆಗೆ suಠಿeಡಿsoಟಿiಛಿ, ಣeಟevisioಟಿ ಇತ್ಯಾದಿ) ಪಾರಿಭಾಷಿಕ ಶಬ್ದ ಸಂಪತ್ತನ್ನು ಬೆಳೆಸಿರುವಂತೆಯೇ ನಾವೂ ಮಾಡಬೇಕು. ಗ್ರೀಕ್ ಮತ್ತು ಲ್ಯಾಟಿನ್ ಶಬ್ದ ಕಾಂಡಗಳಿಗೆ ಬದಲಾಗಿ ನಮ್ಮ ಭಾಷೆಗಳಿಗೆ ಬೆನ್ನೆಲುಬಾಗಿರುವ ಸಂಸ್ಕøತ ಶಬ್ದಕಾಂಡಗಳನ್ನು ಆಶ್ರಯಿಸಬೇಕು. ಈ ದಿಕ್ಕಿನಲ್ಲಿ ಭಾರತ ಸರ್ಕಾರ 1950 ರಲ್ಲಿಯೇ ವೈಜ್ಞಾನಿಕ ಮತ್ತು ತಾಂತ್ರಿಕ ಪಾರಿಭಾಷಿಕ ಪದಾವಳಿ ಆಯೋಗ ಸ್ಥಾಪಿಸಿ ಈ ಕಾರ್ಯಕ್ಕೆ ಚಾಲನೆ ನೀಡಿತು. ಇದಕ್ಕೂ ಮೊದಲೆ ರಾಜೇಂದ್ರಲಾಲ್ ಮಿತ್ರ, ಭಂಡಾರಿ, ರಘುವೀರ್ ಮೊದಲಾದವರು ಈ ಬಗೆಯ ಯತ್ನಗಳನ್ನು ನಡೆಸಿದ್ದರು. 1979 ಬಳಿಕ ಅಖಿಲ ಭಾರತೀಯ ಪಾರಿಭಾಷಿಕ ಪದಾವಳಿಯನ್ನು ರೂಪಿಸುವ ಪ್ರಯತ್ನ ನಡೆದು ಈಗಾಗಲೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಸುಮಾರು 2,50,000 ಶಬ್ದಗಳನ್ನು ರೂಪಿಸಲಾಗಿದೆ.

	ಅಂತಾರಾಷ್ಟ್ರೀಯ ಶಬ್ದಗಳನ್ನು-ಅಂದರೆ ಕನಿಷ್ಟ ಪಕ್ಷ ಮೂರು ಐರೋಪ್ಯ ಭಾಷೆಗಳಲ್ಲಿ ಸಮಾನರೂಪದಲ್ಲಿ ಬಳಕೆಯಲ್ಲಿರುವ ಶಬ್ದಗಳನ್ನು-ಭಾಷಾಂತರಿಸಕೂಡದು. ತೂಕ ಮತ್ತು ಅಳತೆಯ ಮೂಲಮಾನಗಳನ್ನು (ಉದಾಹರಣೆಗೆ ಮೀಟರ್, ಗ್ರಾಮ್, ಲೀಟರ್, ಕೆಲೊರಿ ಇತ್ಯಾದಿ) ಭಾಷಾಂತರಿಸಕೂಡದು; ಅಂಕಿತನಾಮಗಳು ಆಧಾರವಾಗಿರುವ ಶಬ್ದಗಳನ್ನು (ಉದಾಹರಣೆಗೆ ಆಂಪೇರ್, ವೋಲ್ಟ್, ವ್ಯಾಟ್ ಇತ್ಯಾದಿ) ಭಾಷಾಂತರಿಸಕೂಡದು; ಪ್ರಪಂಚ ಬಳಕೆಗಳಿಸುವಂಥ ರೇಡಿಯೋ ಪೆಟ್ರೊಲ್ ರೇಡಾರ್ ಮೊದಲಾದ ಶಬ್ದಗಳನ್ನು ಭಷಾಂತರಿಸಕೂಡದು; ಧಾತುಗಳ ಮತ್ತು ಸಂಯುಕ್ತಗಳ ವೈಜ್ಞಾನಿಕ ಹೆಸರುಗಳನ್ನು (ಉದಾಹರಣೆಗೆ ಆಕ್ಸಿಜನ್, ಹೈಡ್ರೊಜನ್ ಡೈಆಕ್ಸೈಡ್ ಇತ್ಯಾದಿ) ಭಾಷಾಂತರಿಸಕೂಡದು; ಸಸ್ಯವಿಜ್ಞಾನ, ಪ್ರಾಣಿವಿಜ್ಞಾನಗಳಲ್ಲಿ ಕಾಣಬರುವ ದ್ವಿನಾಮಶಬ್ದಗಳನ್ನು (ಉದಾಹರಣೆಗೆ ಜೊನೇಸಿಯಾ ಅಶೋಕ ಇತ್ಯಾದಿ) ಭಾಷಾಂತರಿಸಕೂಡದು; ಬಳಕೆಗೆ ಬಂದು ನೆಲೆನಿಂತಿರುವ ಅಣು, ಪರಮಾಣುವಿನಂಥ ಶಬ್ದಗಳನ್ನು ಔಚಿತ್ಯವರಿತು ಉಳಿಸಿಕೊಳ್ಳುವುದು; ಇತರ ಐರೋಪ್ಯಭಾಷೆಗಳಿಂದ ಎರವಲಾಗಿ ಬಂದಿರುವ ಟಿಕೆಟ್, ಎಂಜಿನ್‍ನಂಥ ಶಬ್ದಗಳನ್ನು ಹಾಗೆಯೇ ಉಳಿಸಿಕೊಳ್ಳುವುದು; ವಿವಿಧ ಅರ್ಥಛಾಯೆಗಳಿಗೆ ವಿಭಿನ್ನ ಶಬ್ದಗಳನ್ನು ಸ್ವೀಕರಿಸುವುದು, ವಿವಿಧ ಭಾರತಿಯ ಭಾಷೆಗಳಲ್ಲಿರುವ ಉಚಿತ ಪಾರಿಭಾಷಿಕ ಶಬ್ದಗಳನ್ನು ಅಂಗೀಕರಿಸುವುದು-ಇವೇ ಮೊದಲಾದ ಸೂತ್ರಗಳನ್ನಿರಿಸಿಕೊಂಡು ಈ ಸಮಸ್ಯೆಯನ್ನು ಬಗೆಹರಿಸುವ ಯತ್ನ ಮಾಡಲಾಗಿದೆ. ಒಟ್ಟಿನಲ್ಲಿ ಶಬ್ದ ಅತ್ಯಂತ ಪಾರಿಭಾಷಿಕವಾಗಿದ್ದಾಗ, ಜನ್ಯಶಬ್ದಗಳ ಆವಶ್ಯಕತೆ ಇದ್ದಾಗ, ಮತ್ತು ಮೂಲಶಬ್ದ ಮತ್ತು ಜನ್ಯರೂಪಗಳು ವಿಜಾತೀಯ ಸ್ವರೂಪದವಾಗಿದ್ದಾಗ ಸಮಾನಶಬ್ದಗಳನ್ನು ಸೃಷ್ಟಿಕೊಳ್ಳಬೇಕಾಗುತ್ತದೆ. ಉಳಿದಂತೆ ಭಾಷೆಯ ಜಾಯಮಾನಕ್ಕೆ ಹೊಂದುವಂತೆ ಪಾರಿಭಾಷಿಕ ಶಬ್ದಗಳನ್ನು ಉಳಿಸಿಕೊಳ್ಳಬೇಕಾಗುತ್ತದೆ. ಅಂತೆಯೇ ಎಲ್ಲ ಪಾರಿಭಾಷಿಕ ಶಬ್ದಗಳೂ ಚುಟುಕಾಗಿರಬೇಕು. ಸಂಪೂರ್ಣ ಅರ್ಥ ಅವುಗಳಲ್ಲಿ ಅಡಗಿರಬೇಕು ಹಾಗೂ ಆ ಅರ್ಥ ಕೂಡಲೇ ಎಲ್ಲರಿಗೂ ಹೊಳೆಯುವಂತಿರಬೇಕು ಎಂಬ ವಿಚಾರಗಳು ಸಲ್ಲದ ಭ್ರಮೆಗಳು ಎಂಬುದನ್ನು ಗಮನಿಸಬೇಕು. ಹೀಗಾಗಿ ಪಾರಿಭಾಷಿಕ ಶಬ್ದಗಳು ವಾಸ್ತವವಾಗಿ ಅಂಥ ಬೃಹತ್ ಸಮಸ್ಯೆಯನ್ನೇನೂ ಒಡ್ಡುವುದಿಲ್ಲ.

	ವೈಜ್ಞಾನಿಕ ಅಥವಾ ತಾಂತ್ರಿಕ ಬರೆಹದ ಯಾವುದೇ ಪ್ರಕಾರವಗಲಿ ನಿಜವಾಗಿಯೂ ಸಮಸ್ಯೆಯನ್ನೊಡ್ಡುವುದು ಅದರ ವಿಶಿಷ್ಟ ರಚನೆಯಲ್ಲಿ, ವಿಷಯದ ಸ್ವಷ್ಟ ಪರಿಜ್ಞಾನ ಮತ್ತು ಭಾಷೆಯ ಸಮರ್ಥಬಳಕೆ ಒಂದುಗೂಡಿದ್ದಲ್ಲಿ ಪರಿಣಾಮಕಾರಿ ಅಭಿವ್ಯಕ್ತಿಯನ್ನು ಒದಗಿಸುವುದು ಸಾಧ್ಯವೆಂಬುದನ್ನು ಕೆಲವು ವಿಜ್ಞಾನ ಲೇಖಕರಾದರೂ ತೋರಿಸಿಕೊಟ್ಟಿದ್ದಾರೆ. ತಾವು ಬರೆಯುವ ಭಾಷೆಯಲ್ಲಿ ಲೇಖಕರು ಸ್ವತಂತ್ರವಾಗಿ ಚಿಂತನ ಮಂಥನ ಮಾಡುವುದು. ಇಲ್ಲಿ ಅನಿವಾರ್ಯ ಅಗತ್ಯ, ಹಾಗೆ ಮಾಡದೆ ವೈಯಕ್ತಿಕ ಅಸಾಮಥ್ರ್ಯವನ್ನು ಭಾಷೆಯ ಮೇಲೆ ಹೇರುವ ಪ್ರಯತ್ನ ಸಾಧುವಲ್ಲ. ವಿಜ್ಞಾನ ಮತ್ತು ಮಾನವಿಕ ಕೃತಿಗಳ ಅನುವಾದಗಳಲ್ಲಿ ಕಂಡುಬರುವ ರಚನಾದೋಷಗಳಿಗೆ-ಅಂದರೆ ಕೃತಕತೆ, ಅಸ್ವಷ್ಟತೆ, ಅಪಾರ್ಥತೆ ಅರ್ಥರಾಹಿತ್ಯ, ಗೊಂದಲ ಇವುಗಳಿಗೆಲ್ಲ-ಅನುವಾದಕರ ವೈಷಯಿಕ ಜ್ಞಾನದ ಅಸಮರ್ಪಕತೆ ಹಾಗೂ ಭಾಷಿಕ ಅಸಾಮಥ್ರ್ಯಗಳೇ ಕಾರಣ. ಹೀಗಾಗಿ ರಚನೆಗಳು ಒಡ್ಡುವ ಸಮಸ್ಯೆಗಳು ಕನ್ನಡದಂಥ ಜೀವಂತಭಾಷೆಗೆ ಸಮಸ್ಯೆಗಳಾಗಿ ಉಳಿಯುವುದಿಲ್ಲವೆಂಬುದೂ ಸ್ವಷ್ಟವಾಗುತ್ತದೆ.

	13 ಯಂತ್ರಾನುವಾದ: ಇದು ಅನುವಾದ ಕ್ಷೇತ್ರದಲ್ಲಿಯ ಈಚಿನ ಗಮನಾರ್ಹ ಬೆಳೆವಣಿಗೆ. ಗಣಕವನ್ನು ಬಳಸಿ ಅನುವಾದ ಸಿದ್ಧಪಡಿಸುವ ಸಾಧ್ಯತೆ ಮಾನವಮತಿಗೆ ಹೊಳೆದದ್ದೇ ಇದರ ಕಾರಣ. ಆಧುನಿಕ ಯುಗದಲ್ಲಿ ಭಾಷಾಂತರಕ್ಕೆ ದೊರೆತಿರುವ ಮಹತ್ತ್ವ, ಪ್ರಾಧಾನ್ಯಗಳ ದೃಷ್ಟಿಯಿಂದ ಮಾತ್ರವಲ್ಲದೆ ಅಗತ್ಯತೆಯ ದೃಷ್ಟಿಯಿಂದಲೂ ಯಂತ್ರಗಳ ಮರೆಹೋಗುವ ಸಾಧ್ಯತೆಯನ್ನು ಪರಿಶೀಲಿಸಬೇಕಾಗಿ ಬಂತು, ಇದರ ಫಲವೇ ಯಂತ್ರಾನುವಾದ. ಭಾಷಾವಿಜ್ಞಾನಿಗಳು, ಭೌತವಿಜ್ಞಾನಿಗಳು, ಎಲೆಕ್ಟ್ರಾನಿಕ್ಸ್ ಎಂಜಿನಿಯರುಗಳು ಮತ್ತು ತಂತ್ರವಿದ್ಯಾ ಪರಿಣತರು ಈ ದಿಕಿನಲ್ಲಿ ಸಹಕರಿಸಿ ಒಟ್ಟಾಗಿ ದುಡಿಯುತ್ತಿದ್ದಾರೆ. ಕಳೆದ ಮೂರು ದಶಕಗಳಿಂದ ರಷ್ಯಾ, ಇಂಗ್ಲೆಂಡ್, ಅಮೆರಿಕ, ಫ್ರಾನ್ಸ್, ಕೆನಡಾ, ಜರ್ಮನಿ, ಭಾರತ ಮೊದಲಾದ ದೇಶಗಳಲ್ಲಿ ಈ ಕುರಿತ ಅಧ್ಯಯನ ಮತ್ತು ಸಂಶೋಧನ ಕಾರ್ಯಗಳು ನಡೆದುಬಂದಿವೆ. ಕೆನಡಾದಂಥ ಅಧಿಕೃತ ದ್ವಿಭಾಷಾ ರಾಷ್ಟ್ರಕ್ಕಂತೂ ಇಂಥ ಪ್ರಯೋಗ ವಿಶಿಷ್ಟ ಮಹತ್ತ್ವದ್ದಾಗಿತ್ತು. ಏಕೆಂದರೆ ಪಾರ್ಲಿಮೆಂಟ್ ಅಧಿವೇಶನದ ಅವಧಿಯಲ್ಲಿ ಏಕಕಾಲದಲ್ಲಿ ಎರಡು ಭಾಷೆಗಳನ್ನು ಬಳಸಬೇಕಾದ ಅನಿವಾರ್ಯತೆ ಉಂಟಾಗಿತ್ತು. ಈ ಸಂಬಂಧವಾದ ಆರಂಭಿಕ ಕಾರ್ಯಗಳು ನಡೆದದ್ದು ಇಂಗ್ಲೆಂಡಿನಲ್ಲಿಯೇ ಆದರೂ ಅಮೆರಿಕಸಂಯುಕ್ತ ಸಂಸ್ಥಾನ ತುಂಬ ಆಸಕ್ತಿಯಿಂದ ಇದರ ಸಾಧ್ಯಾಸಾಧ್ಯತೆಗಳು ಮತ್ತು ಪರಿಮಿತಿಗಳು ಏನೆಂಬುದನ್ನು ಕಂಡುಕೊಳ್ಳಲು ವಿಶೇಷ ಪರಿಶೀಲನೆಗಳನ್ನು ನಡೆಸಿದೆ. ಇದರ ವ್ಯಾವಹಾರಿಕ ಉಪಯುಕ್ತತೆಯನ್ನು ಕಂಡುಕೊಳ್ಳುವ ದೃಷ್ಟಿಯಿಂದ ಸೋವಿಯೆತ್ ರಷ್ಯಾದೇಶ ಅನೇಕ ವಿಶ್ಲೇಷಣೆಗಳನ್ನೂ ಸಂಶೋಧನೆಗಳನ್ನೂ ನಡೆಸಿದೆ. ಇಂಗ್ಲೆಂಡ್, ಫ್ರಾನ್ಸ್ ಮೊದಲಾ ಐರೋಪ್ಯರಾಷ್ಟ್ರಗಳು ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಸೋವಿಯತ್ ರಷ್ಯಾಗಳಿಗೆ ಸೈನಿಕ ಗೂಢಚರ್ಯೆಯ ದೃಷ್ಟಿಯಿಂದಲೂ ಈ ಪ್ರಯೋಗಗಳಲ್ಲಿ ವಿಶೇಷ ಆಸಕ್ತಿ ಇತ್ತು. ಬಹುಭಾಷಾ ರಾಷ್ಟ್ರವಾದ ಭಾರತವೂ ಯಂತ್ರಾನುವಾದದ ಬಗ್ಗೆ ಸಾಕಷ್ಟು ಆಸಕ್ತಿ ತೋರಿದೆ. ಬೆಂಗಳೂರಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯಲ್ಲಿ ಕಳೆದ ಎರಡುದಶಕಗಳಿಂದ ಈ ಬಗ್ಗೆ ಸಂಶೋಧನೆಗಳು ನಡೆದಿವೆ. ಕೆಲವು ವಾಕ್ಯಗಳನ್ನು ಇಂಗ್ಲಿಷಿನಿಂದ ಹಿಂದಿಗೆ ಭಾಷಾಂತರಿಸಲು ಸಾಧ್ಯವಾಗಿದೆ ಎಂದು ವರದಿಯಾಗಿದೆ.

	ಇತಿಹಾಸ : ಅನುವಾದಕಾರ್ಯಕ್ಕೂ ಗಣಕವನ್ನು ಬಳಸಬಹುದೆಂಬ ಸೂಚನೆ ನೀಡಿದ ಮೊದಲಿಗ ಎ. ಡಿ. ಬೂತ್. ವಾಸ್ತವಾಗಿ ಈತನೇ ಯಂತ್ರಾನುವಾದ ಪರಿಕಲ್ಪನೆಯ ಜನಕ. 1949ರ ಹೊತ್ತಿಗೆ ಈತನ ಮನಸ್ಸಿನಲ್ಲಿ ಈ ಯೋಜನೆ ಅಸ್ಪಷ್ಟವಾಗಿ ಮೂಡಿತ್ತು. ಮರುವರ್ಷ ಇದನ್ನು ಲಿಪಿಬದ್ಧ ರೂಪದಲ್ಲಿ ಮಂಡಿಸಿದ. ಅಮೆರಿಕಾದ ಖ್ಯಾತ ಭಾಷಾವಿಜ್ಞಾನಿ ವ್ಯಾರೆನ್ ವೀವರ್ ಜೊತೆ ಬೂತ್ ಈ ವಿಚಾರ ಚರ್ಚಿಸಿದ. ಮಾನವ ಭಾಷಾಂತರಕಾರರು ಕೋಶಗಳನ್ನು ಪರಿಶೀಲಿಸಿ ಪರ್ಯಾಯಗಳನ್ನು ಕಂಡುಕೊಳ್ಳುವಂತೆ, ಗಣಕದ ಮೂಲಕವೂ ಪರಿಶೀಲನಕಾರ್ಯ ನಡೆಸುವಷ್ಟದ ಮಟ್ಟಿನ ಪ್ರಗತಿಮಾತ್ರ ಅಲ್ಲಿಯ ತನಕ ಸಾಧ್ಯವಾಗಿತ್ತು. ಈ ಪ್ರಯತ್ನಗಳು ಸಾಕಷ್ಟು ಭರವಸೆ ಮೂಡಿಸಿದ್ದುವು. ಭಾಷಾಂತರ ಕಾರ್ಯಗಳಲ್ಲಿ ತೊಡಗಬಲ್ಲ ಗಣಕ ಬಲುಬೇಗ ದೊರೆಯಬಹುದೆಂಬ ನಿರೀಕ್ಷೆ ಉಂಟಾಗಿತ್ತಾದರೂ 1950ರ ತನಕ ಇಂತ ಯಾವ ಯಂತ್ರವೂ ಮೈದಳೆಯಲಿಲ್ಲ. ಈ ಅವಧಿಯಲ್ಲಿ ಬೂತ್ ಮತ್ತು ರಿಜೆನ್ಸ್ ಎಂಬ ಇನ್ನೊಬ್ಬ ವಿದ್ವಾಂಸ ಗಣಕದಲ್ಲಿ ಅಳವಡಿಸಬಹುದಾದ ಕೋಶದ ಸ್ವರೂಪ ಹೇಗಿರಬೇಕೆಂಬ ಬಗ್ಗೆ ಅಧ್ಯಯನ ನಡೆಸಿದ್ದು ತಮ್ಮ ತಾತ್ಕಾಲಿಕ ಅನಿಸಿಕೆಗಳನ್ನು ಪ್ರಬಂಧರೂಪದಲ್ಲಿ ಮಂಡಿಸಿದ್ದರು. ಆಸಕ್ತ ಕ್ಷೇತ್ರಗಳಲ್ಲಿ ಈ ಪ್ರಬಂಧದ ಪರಿಶೀಲನೆ ನಡೆದಿತ್ತು.

	ವ್ಯಾರೆನ್ ವೀವರ್ ಅಮೆರಿಕದಲ್ಲಿ ಈ ಯೋಜನೆಯನ್ನು ಮಂಡಿಸಿದಾಗ ಭಾಷಾವಿಜ್ಞಾನಿಗಳು ಮಾತ್ರವಲ್ಲದೆ ನಾರ್ಬರ್ಟ್ ವೀನರ್‍ನಂಥ ಪ್ರಗತಿವಾದಿಗಳು ಕೂಡ ಅಪಸ್ವರ ಮಿಡಿದರು. ಇಷ್ಟಾಗಿಯೂ ವೀವರ್ 1948ರಲ್ಲಿ ತನ್ನ ಕಾರ್ಯ ಯೋಜನೆಯ ಪ್ರಬಂಧಕ್ಕೆ ವ್ಯಾಪಕ ಪ್ರಚಾರಕೂಟ್ಟ. ಮಸಾಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟಿಕ್ನಾಲಜಿಯ ಬಾರ್-ಹಿಲೇಲ್ ತುಂಬ ಆಸಕ್ತಿಯಿಂದ ಇದನ್ನು ಪರಿಶೀಲನೆಗೆ ಎತ್ತಿಕೊಂಡ. ಆದರೂ ಈ ಕ್ಷೇತ್ರದಲ್ಲಿ ತೀವ್ರಕಾರ್ಯ ನಡೆದದ್ದು 1950ರ ತರುವಾಯವೇ. ತಾನು ಈ ಕ್ಷೇತ್ರದಲ್ಲಿ ನಡೆಸಿದ ಅಧ್ಯಯನಗಳ ಫಲವನ್ನು ರೈಫ್ಲರ್ ಕೆಲವು ಏಕವಿಷಯಕ ಪ್ರಬಂಧಗಳ ರೂಪದಲ್ಲಿ ಮಂಡಿಸಿದ. ಯುಕ್ತ ಪ್ರಚಾರ ಮಾಧ್ಯಮದ ಅಭಾವ ಇದ್ದುದರಿಂದ ಖಾಸಗಿ ಸ್ವರೂಪದಲ್ಲೇ ವಿಚಾರವಿನಿಮಯ ನಡೆಯಿತು. ಬೂತ್ ಮತ್ತು ರಿಚೆನ್ಸ್ ಅವರ ಆಲೋಚನೆಗಳನ್ನು 1951ರಲ್ಲಿ ಕಾರ್ಯತ: ಪರಿಶೀಲಿಸಲಾಯಿತು. ಈ ಕಾರ್ಯಕ್ಕೆ ಶಿಷ್ಟ ರಂಧ್ರಿತ ಪತ್ರ ಯಂತ್ರಾವಳಿಯನ್ನು (ಸ್ಟ್ಯಾಂಡಡಪಂಚ್ಡ್ ಕಾರ್ಡ್ ಮಶೀನರಿ) ಬಳಸಲಾಯಿತು. ಫಲಿತಾಂಶ ನಿರೀಕ್ಷಿಸಿದಂತೆಯೇ ಇತ್ತು. ಈ ವ್ಯವಸ್ಥೆಯಲ್ಲಿ ನಿರೀಕ್ಷಿಸಲಾಗಿದ್ದ ದೋಷಗಳೆಲ್ಲ ಅದರಲ್ಲಿ ಮೈದಳೆದಿದ್ದುವು. ಇಷ್ಟಾಗಿಯೂ ಈ ಪ್ರಯೋಗಗಳು ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆ ಅಪೇಕ್ಷಣೀಯವಾಗಿದೆ ಎಂಬ ಯೋಜನೆಗೆ ಅಗತ್ಯವಾಗಿದ್ದಷ್ಟು ಬೆಂಬಲ ಇನ್ನೂ ದೊರೆಯದೆ ಇದ್ದುದರಿಂದ ಸಂಶೋಧನೆಗಳು ಮಂದಗತಿಯಲ್ಲಿಯೇ ಸಾಗಿದುವು.

	1953ರಲ್ಲಿ ರಾಕಿಫೆಲರ್ ಪ್ರತಿಷ್ಠಾನ ಈ ಕ್ಷೇತ್ರದಲ್ಲಿ ಆಸಕ್ತಿಯಿಂದ ದುಡಿಯುತ್ತಿದ್ದ ವಿದ್ವಾಂಸರನ್ನು ಆಹ್ವಾನಿಸಿ ಒಂದು ಸಮ್ಮೇಳನ ನಡೆಸಿತು. ಬಾರ್-ಹಿಲೇಲ್ ಯಂತ್ರಾನುವಾದದ ವಿಶಿಷ್ಟ ಸಮಸ್ಯೆಗಳನ್ನು ವಿಶ್ಲೇಷಿಸಿದುದು ಸಮ್ಮೇಳನದ ವೈಶಿಷ್ಟ್ಯ. ಇದರ ನಡೆವಳಿಗಳನ್ನೇನೂ ಪ್ರಕಟಿಸದಿದ್ದರೂ ಯಂತ್ರಾನುವಾದಕ್ಕೆ ಪೂರ್ವಭಾವಿಯಾಗಿ ಸೂಕ್ಷ್ಮ ಶಬ್ದಕೋಶಗಳನ್ನು (ಮೈಕ್ರೂಗ್ಲಾಸರೀಸ್) ಸಿದ್ಧ ಪಡಿಸಬೇಕೆಂಬ ಹಾಗೂ ಭಾಷಾಸಂಬಂಧವಾಗಿ ಭಾಷಾವಿಜ್ಞಾನಿಗಳು ಅಲ್ಲಿಯತನಕ ಕೈಗೊಂಡಿರದಿದ್ದ ಸಂಖ್ಯಾಕಲನಾತ್ಮಕ ವಿಶ್ಲೇಷಣೆ ಕೈಗೊಳ್ಳಬೇಕೆಂಬ ವಿಚಾರಗಳನ್ನು ಈ ಸಮ್ಮೇಳನ ಸ್ಪಷ್ಟಪಡಿಸಿತು. ಇದು ನಡೆದ ತರುಣದಲ್ಲಿಯೇ ಐ.ಬಿ.ಎಮ್. ಕಾರ್ಪೊರೇಷನ್ ಮತ್ತು ಜಾಜ್ ಟೌನ್ ವಿಶ್ವವಿದ್ಯಾಲಯ ನಡೆಸಿದ ಸಂಯುಕ್ತ ಪ್ರಯತ್ನ ವ್ಯಾಪಕ ಪ್ರಚಾರ ಪಡೆಯಿತು. ಇದರಲ್ಲಿ 250 ಶಬ್ದಗಳ ಸೀಮಿತ ಶಬ್ದಕೋಶ ಇಟ್ಟುಕೊಂಡು ಆಯ್ದ ಕೆಲವು ರಷ್ಯನ್ ವಾಕ್ಯಗಳನ್ನು ಭಾಷಾಂತರಿಸಲಾಗಿತ್ತು. ಈ ಬಗ್ಗೆ ಮುಂದೆ ಸಮಗ್ರ ವರದಿಯನ್ನು ಪ್ರಕಟಿಸಲಾಯಿತು. ನಫೀಲ್ಡ್ ಪ್ರತಿಷ್ಠಾನ 1955ರಲ್ಲಿ ಲಂಡನ್ ವಿಶ್ವವಿದ್ಯಾಲಯದ ಬಿರಾಬೆಕ್ ಕಾಲೇಜಿಗೆ ಉದಾರ ಸಹಾಯಧನ ಮಂಜೂರುಮಾಡಿ ಯಂತ್ರಾನುವಾದದ ಪರಯೋಗಗಳನ್ನು ಮುಂದುವರಿಸಲು ಅವಕಾಶಮಾಡಿಕೊಟ್ಟಿತು. ಈಗ ಪ್ರಯೋಗಕ್ಕೆ ಫ್ರೆಂಚ್ ಭಾಷೆಯನ್ನು ಆಯ್ದುಕೊಳ್ಳಲಾಯಿತು. ಯಾವುದೇ ಬಗೆಯ ಪೂರ್ವಾಗ್ರಹಗಳಿಗೆ ಒಳಗಾಗಿರದಂಥ ಭಾಷಾ ವಿಜ್ಞಾನಿಗಳು ಈ ಪ್ರಯೋಗದಲ್ಲಿ ಪಾಲ್ಗೊಂಡರು. ಫಲಿತಾಂಶ ತುಂಬ ಉತ್ತೇಜಕವಾಗಿತ್ತು. ಫ್ರೆಂಚ್ ಭಾಷೆ 1956ರ ವೇಳೆಗೆ ಯಂತ್ರಾನುವಾದಕ್ಕೆ ಸಂಬಂಧಿಸಿದ ಬಹುತೇಕ ಸಮಸ್ಯೆಗಳನ್ನು ಮೀರಿ ನಿಲ್ಲಲು ಸಮರ್ಥವಾಯಿತೆಂದು ಹೇಳಲಾಯಿತು. ಹೀಗಾಗಿ ಮತ್ತಷ್ಟು ಕ್ಲಿಷ್ಟ ಸಮಸ್ಯೆಗಳನ್ನು ಬಗೆಹರಿಸುವತ್ತ ಈ ತಂಡ ಗಮನಹರಿಸಿತು. ಈ ಬಾರಿ ಜರ್ಮನ್ ಭಾಷೆಯನ್ನು ಪ್ರಯೋಗದ ಕಕ್ಷೆಗೆ ಒಳಪಡಿಸಲಾಯಿತು.

	ಇತ್ತ ಅಮೆರಿಕದಲ್ಲೂ ಸೈದ್ಧಾಂತಿಕ ಮತ್ತು ತಾರ್ಕಿಕ ವಿವೇಚನೆಗಳು ನಡೆಯುತ್ತಿದ್ದುವು. ರಾಕಿಫೆಲರ್ ಪ್ರತಿಷ್ಠಾನ ಮತ್ತೆ ನೆರವಿಗೆ ಬಂದದ್ದರಿಂದ ಮಸಾಚೂಸೆಟ್ಸ್ ತಂತ್ರವಿದ್ಯಾ ಸಂಸ್ಧೆ ಪೂರ್ಣಕಾಲೀನ ಕಾರ್ಯಕರ್ತರನ್ನು ನೇಮಿಸಿಕೊಂಡು ಈ ವಿಷಯಕ್ಕೆ ಸಂಬಂಧಿಸಿದ ಸಂಶೋಧನೆಗಳನ್ನು ಮುಂದುವರಿಸಿತು. ಯಂತ್ರಾನುವಾದದ ಬಗೆಗಿನ ಮೊದಲ ಪುಸ್ತಕವನ್ನು ಅದು ಹೊರತಂದಿತು. ಜೊತೆಗೆ ಯಂತ್ರಾನುವಾದದ ಬಗೆಗಿನ ಸಂಶೋಧನಾತ್ಮಕ ಲೇಖನಗಳಿಗೇ ಮೀಸಲಾದ ನಿಯತಕಾಲಿಕ ಪ್ರತಿಕ ಒಖಿಯನ್ನು ಆರಂಭಿಸಲಾಯಿತು. ರೈಫ್ಲರ್, ಓಸ್ವಾಲ್ಡ್, ಫ್ಲೆಚರ್ ಮೊದಲಾದವರು ಸೈದ್ಧಾಂತಿಕ ಪಕ್ಷವನ್ನೂ ವಿವರಿಸುವ ಲೇಖನಗಳನ್ನು ಬರೆದರು. ಗಣಕವನ್ನು ಬಳಸುವ ದಿಶೆಯಲ್ಲಿ ವಿಶೇಷ ಗಮನಹರಿಯದೆ ಇದ್ದುದರಿಂದ ಹೇಳಿಕೊಳ್ಳಬಹುದಾಂಥ ಪ್ರಗತಿಯೇನೂ ಸಾಧಿತವಾಗಲಿಲ್ಲ. ಇತ್ತ ಅಮೆರಿಕದ ವಾಯುಪಡೆ ಗಣಕದಲ್ಲಿ ಅಳವಡಿಸಬಹುದಾದ ಕೋಶಸಂಗ್ರಹಣ ಯಂತ್ರದ ನಿರ್ಮಾಣದತ್ತ ಗಮನಹರಿಸಿತು.

	ರಷ್ಯನ್ನರೂ ಈ ವಿಚಾರದಲ್ಲಿ ಆಸಕ್ತರಾಗಿ ಪ್ರಯೋಗಗಳನ್ನು ನಡೆಸುತ್ತಿದ್ದರು (1955). 1956ರಲ್ಲಿ ಇನ್‍ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಎಂಜಿನಿಯರ್ಸ್ ಸಂಸ್ಧೆಯ ವಿಚಾರಸಂಕಿರಣವೊಂದರಲ್ಲಿ ಮಂಡಿಸಲಾದ ಪ್ರಬಂಧ ಮಾಸ್ಕೋ ವಿಶ್ವವಿದ್ಯಾಲಯದಲ್ಲಿ ಈ ಸಂಬಂಧ ನಡೆಸಲಾಗಿದ್ದ ಪ್ರಯೋಗಗಳ ಬಗೆಗಿನ ವಿಶ್ಲೇಷಣಾತ್ಮಕ ವರದಿಯನ್ನೊಳಗೊಂಡಿತ್ತು. ವರದಿಯಾಗಿದ್ದ ಫಲಿತಾಂಶಗಳನ್ನು ನೋಡಿದಾಗ ಯಂತ್ರಮಾತ್ರವೇ ಅದರಲ್ಲಿ ಭಾಗವಹಿಸಿರಲಾರದೆಂಬ ಸಂದೇಹ ಅನೇಕರಿಗೆ ಮೂಡಿತು. ಇಷ್ಟಾಗಿಯೂ ರಷ್ಯನ್ನರ ಭಾಷಿಕ ವಿಶ್ಲೇಷಣೆಗಳು ಮತ್ತು ಅನುವಾದವಿಧಾನಗಳು ಉತ್ತಮ ಮಟ್ಟದವಾಗಿದ್ದುವೆಂದು ಪಾಶ್ಚಾತ್ಯ ಸಂಶೋಧಕರು ಅಭಿಪ್ರಾಯಪಟ್ಟರು.

	ಅಪೆಕ್ಸ್ ಸಿ ಗಣಕವನ್ನು ಬಳಸಿಕೊಂಡು ಬಿರೆಬೆಕ್ ಕಾಲೇಜಿನಲ್ಲಿ ಎ. ಡಿ. ಬೂತ್ ಎಂಬಾತನ ನೇತೃತ್ವದ ಸಂಶೋಧಕ ತಂಡ ಅನೇಕ ಪ್ರಯೋಗಗಳನ್ನು ನಡೆಸಿತು (1956). ಫಲಿತಾಂಶಗಳು ಅಪೇಕ್ಷಣೀಯವಾದ ಎಲ್ಲ ಅಂಶಗಳನ್ನು ಒಳಗೊಂಡಿರದಿದ್ದರೂ ಉತ್ತೇಜಕವೂ ಗಮನಾರ್ಹವೂ ಆಗಿದ್ದವು. ಅನಂತರದ ಅವಧಿಯಲ್ಲಿ ಕೆನಡಾದಲ್ಲಿ ಈ ಕುರಿತ ವಿಶೇಷ ಅಧ್ಯಯನಗಳೂ ಬೂತ್‍ನ ನೇತೃತ್ವದಲ್ಲಿಯೇ ನಡೆದುವು. ಈಚೆಗೆ ಈ ಕ್ಷೇತ್ರದಲ್ಲಿ ಸಾಧಿತವಾಗಿರುವ ಪ್ರಗತಿಯ ವಿವರಗಳನ್ನೊಳಗೊಂಡ ಗ್ರಂಥವನ್ನು ಆತ ಹೊರತಂದಿದ್ದಾನೆ. ಅಮೆರಿಕದಲ್ಲಿಯೂ ಈ ದಿಕ್ಕಿನಲ್ಲಿ ಸಾಕಷ್ಟು ಪ್ರಗತಿ ಸಾಧಿಸಲಾಯಿತು. ಇಷ್ಟಾಗಿಯೂ ವಸ್ತುಬದ್ಧಭಾಗದ ಭಾಷಾಂತರದ (ಮ್ಯಾಟರ್ ಆಫ್ ಫ್ಯಾಕ್ಟ್ ಟ್ರಾನ್‍ಸ್ಲೇಶನ್) ವಲಯದಲ್ಲಿ ಮಾತ್ರ ಯಂತ್ರಾನುವಾದ ನಡೆಯುತ್ತಿರುವುದಾಗಿದೆ. ಮಾನವ ಮತಿಗೆ ಇರುವ ಸೌಲಭ್ಯಾವಕಾಶಗಳಿಂದ ವಂಚಿತವಾಗಿರುವ ಗಣಕ ಮಾನವ ಭಾಷಾಂತರಕಾರರನ್ನು ಮೆಟ್ಟಿ ನಿಲ್ಲಲಾರದು ಎಂಬುದಂತೂ ಖಚಿತವಾಗಿದೆ. ಇತ್ತೀದಿನ ಪ್ರಕಟಣೆಯೊಂದರಲ್ಲಿ ಬಾರ್-ಹಿಲೇಲ್ ಇಂಥದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾನೆ. ಮಾನವಮತಿಯನ್ನು ಈ ಉದ್ಯೋಗದಿಂದ ಸಂಪೂರ್ಣವಾಗಿ ಮುಕ್ತಗೊಳಿಸುವ ಧ್ಯೇಯ ಇನ್ನೂ ಬಲುದೂರದಲ್ಲಿಯೇ ಇರುವಂತೆ ತೋರುತ್ತದೆ. ಇಲ್ಲಿಯ ತನಕ ಯಂತ್ರಾನುವಾದ ಸಾಹಿತ್ಯಕ್ಷೇತ್ರದಿಂದ ದೂರವಾಗಿಯೇ ಉಳಿದಿದೆ. ಹೀಗಿರುವುದೇ ನಮಗೂ ಅಪೇಕ್ಷಣೀಯ ಎಂದು ಬೂತ್ ಹೇಳಿದ್ದಾನೆ. ಅಂದರೆ ಇಂದೂ ಮುಂದೂ ಗಣಕಗಳ ಮೂಲಕ ನಡೆಯುವ ಅನುವಾದದ ಕ್ಷೇತ್ರಗಳು ತುಂಬ ಸೀಮಿತವಾಗಿ ಉಳಿಯುವ ಸಂಭವವೇ ಹೆಚ್ಚು.

	ಅನುವಾದ ವಿಧಾನ ಮತ್ತು ಸಮಸ್ಯೆಗಳು: ಯಾವುದೇ ಅನುವಾದದ, ಅಂತೆಯೇ ಯಂತ್ರಾನುವಾದದ, ಮೂಲಭೂತ ಸಮಸ್ಯೆ ಕೋಶಗಳಿಗೆ ಮತ್ತು ರಚನೆಗಳಿಗೆ ಸಂಬಂಧಿಸಿದ್ದು. ಸಾಂಪ್ರದಾಯಿಕ ಕೋಶಗಳನ್ನು ಪರಿಶೀಲಿಸುವ ಮಾನವಭಾಷಾಂತರಕಾರ ಸಂದರ್ಭಕ್ಕೆ ಯುಕ್ತವಾದ ಅರ್ಥ ಕಂಡುಕೊಳ್ಳಬಲ್ಲ. ಪ್ರಸಂಗಕ್ಕೆ ಸಂಗತವಾದ ಅರ್ಥ ಆಯುವಲ್ಲಿ ಅವನ ವ್ಯುತ್ಪತ್ತಿ, ಅಧ್ಯಯನ ಮತ್ತು ಅನುಭವ ನೆರವಾಗುತ್ತವೆ. ಮಾನವಮತಿಯ ಈ ಸಹಜ ಲೀಲೆ ಯಂತ್ರದ ದೃಷ್ಟಿಯಿಂದ ಪವಾಡಸದೃಶವಾಗಿರುತ್ತದೆ. ಅದಕ್ಕೆ ಈ ವಿವೇಚನೆಯಾಗಲೀ ಇದಕ್ಕೆ ಹಿನ್ನೆಲೆಯಾಗಿರುವ ಅಧ್ಯಯನ, ವ್ಯುತ್ಪತ್ತಿ, ಅನುಭವ ಮತ್ತು ಸ್ಮರಣೆಯಾಗಲೀ ಇರುವುದಿಲ್ಲ. ಹೀಗಾಗಿ ಯಂತ್ರದ ದೃಷ್ಟಿಯಿಂದ ಮೊತ್ತಮೊದಲ ಆವಶ್ಯಕತೆಯೆಂದರೆ ಯುಕ್ತಕೋಶ. 1946ರ ಹೊತ್ತಿಗೆ ಬೂತ್ ಇಂಥ ಕೋಶದ ಸ್ವರೂಪ ಹೇಗಿರಬೇಕೆಂಬ ಬಗ್ಗೆ ಅಧ್ಯಯನ ನಡೆಸಿದ್ದ. 1948-49ರಲ್ಲಿ ಬೂತ್ ಮತ್ತು ರಿಚೆನ್ಸ್ ಈ ಸಮಸ್ಯೆಯ ಬಗ್ಗೆ ಆಳಪರಿಶೀಲನೆ ನಡೆಸಿದರು. ಗಣಕದ ಜ್ಞಾಪಕಾಂಗದಲ್ಲಿ ಸಾಂಪ್ರದಾಯಿಕ ರೀತಿಯ ಕೋಶ ಅಳವಡಿಸಬೇಕೆಂಬುದು ಮೊದಲು ಸೂಚಿತವಾದ ಸಲಹೆ. ಆದರೆ ಇಂಥ ಕೋಶ ಉಪಯುಕ್ತವಾಗಲಾರದೆಂದು ಬಲುಬೇಗ ತಿಳಿಯಿತು. ಹೀಗಾಗಿ ಹೊಸ ತತ್ತ್ವವೊಂದರ ಆಧಾರದಮೇಲೆ ರಚಿತವಾದ ಕೋಶವನ್ನು ಅಳವಡಿಸಬೇಕೆಂದು ಯೋಜಿಸ ಲಾಯಿತು. ಅಂದರೆ ಧಾತು, ನಾಮಪದ ಮುಂತಾದವುಗಳಿಗೆ ಬದಲಾಗಿ ಈ ಶಬ್ದಗಳ ಗರಿಷ್ಠ ಘಟಕಗಳನ್ನು ಸಂಗ್ರಹಿಸುವುದು. ಯಾವುದೇ ಶಬ್ದದ ಹಲವಾರು ರೂಪಗಳಲ್ಲಿ ಸಮಾನ ರೂಪದಲ್ಲಿ ಕಾಣದೊರೆಯುವ ಅಂಶವನ್ನೇ ಶಬ್ದದ ಗರಿಷ್ಠ ಘಟಕವೆಂದು ಭಾವಿಸಬೇಕೆಂದು ಯೋಚಿಸಲಾಯಿತು.

	ಈ ಸಲಹೆ ಯಂತ್ರಾನುವಾದದ ಸಾಧ್ಯತೆಯ ಆಯಾಮಗಳನ್ನು ಬಲುವಾಗಿ ವಿಸ್ತರಿಸಿತು. ಗಣಕ ಒದಗಿಸಬಹುದಾದ ಸೀಮಿತಾವಕಾಶದಲ್ಲಿ ಅತ್ಯಂತ ಹೆಚ್ಚು ಶಬ್ದಗಳ ಸಂಗ್ರಹ ಇಡುವುದು ಈ ಕಾಂಡ ವಿಧಾನದಿಂದ (ಸ್ಟೆಮ್ ಎಂಡಿಂಗ್ ಪ್ರೋಸೀಜರ್) ಸಾಧ್ಯವಾಯಿತು. ಸಮಸ್ಯೆಯ ಉಗ್ರತೆಯನ್ನು ಇದು ಕಡಿಮೆ ಮಾಡಿತು. ಇಷ್ಟಾಗಿಯೂ ಕೆಲವು ಶಬ್ದಗಳ ನಿರ್ದಿಷ್ಟಾನುವಾದ ಅನೇಕವೇಳೆ ಅಸಾಧ್ಯವಾಗುತ್ತದೆ. ಅಂದರೆ ವಿಶಿಷ್ಟ ಸಂದರ್ಭಗಳಲ್ಲಿ ಸಮಸ್ಯೆ ಉಳಿಯದೆ ವಿಧಿಯಿಲ್ಲವೇನೋ ಎನಿಸುತ್ತದೆ. ರಿಚೆನ್ಸ್ ಇಂಥ ಒಂದು ಉದಾಹರಣೆ ಒದಗಿಸಿದ್ದಾನೆ. Desideremus ಶಬ್ದವನ್ನು ಕಾಂಡವಿಧಾನದ ಮೂಲಕ desidercmus ಎಂದು ಅಥವಾ desider-emus ಎಂದು ಬಿಡಿಸಬಹುದು. ಮೊದಲ ರೀತಿಯಲ್ಲಿ ಬಿಡಿಸಿದರೆ ಅಪೇಕ್ಷಿತ ಎಂಬ ಅರ್ಥವೂ ಎರಡನೆಯ ರೀತಿಯಲ್ಲಿ ಬಿಡಿಸಿದರೆ ಸೋಮಾರಿಯಾಗಿರು ಎಂಬ ಅರ್ಥವೂ ದೊರೆಯುತ್ತವೆ. ಆದರೆ ಇಂಥ ಶಬ್ದಗಳ ಸಂಖ್ಯೆ ತುಂಬ ಸೀಮಿತವಾಗಿರುವುದರಿಂದ ವಿಶಿಷ್ಟ ಸಂದರ್ಭಗಳನ್ನು ಪರಿಗಣನೆಗೆ ತೆಗೆದುಕೊಂಡು ಅವುಗಳ ಅರ್ಥದ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದೆಂದು ಯೋಚಿಸಲಾಯಿತು.

	ಈ ವಿಧಾನದಲ್ಲಿ ಗಣಕ ನೇರ ಅನುವಾದ ಕೊಡದೆ ಮೂಲಾಂಶವನ್ನು ಮಾತ್ರ ಅನುವಾದಿಸಿ ವ್ಯಾಕರಣಾಂಶಗಳಿಗೆ ಸಂಬಂಧಿಸಿದಂತೆ ಸೂಚನೆಗಳನ್ನು ದಾಖಲಿಸುತ್ತಿತ್ತು. ಉದಾಹರಣೆಗೆ ಛಿheಡಿಛಿhಚಿis ಶಬ್ದದ ಅನುವಾದ seeಞ (IPSI) ಎಂಬುದಾಗಿ ದೊರೆಯುತ್ತಿತ್ತು. ಇದಕ್ಕೆ ಅಭ್ಯsಸ್ಥನಾದ ವ್ಯಕ್ತಿ ಇದನ್ನು ಉತ್ತಮ ಪುರುಷ ಏಕವಚನ ಅಪೂರ್ಣ (ಭೂತಕಾಲ) ಎಂದು ಅರ್ಥಮಾಡಿಕೊಳ್ಳುತ್ತಿದ್ದ. ಬ್ಯಾಂಡ್‍ವುಡ್ ಈ ಚಿಂತನೆಯನ್ನು ಮತ್ತಷ್ಟು ಪರಿಷ್ಕರಿಸಿ ವ್ಯಾಕರಣ ವಿವರಗಳಿಗೆ ಬದಲಾಗಿ ನೇರ ಅನುವಾದವನ್ನೇ ಕೊಡುವಂಥ ಕ್ರಮರೂಪಿಸಿದ. ಇದಕ್ಕೆ ಅವನು ಮಾಡಿದ ಪರಿಷ್ಕಾರ ಇಷ್ಟೆ; ಇದರಲ್ಲಿ ಶಬ್ದಕಾಂಡದ ಕೋಶದ ಜೊತೆಗೆ ಪದಾಂತ್ಯಕೋಶವನ್ನೂ ಅಳವಡಿಸಿರುತ್ತದೆ. ಗಣಕ ಮೊದಲಿಗೆ ವಿದೇಶಿ ಭಾಷೆಯ ಶಬ್ದಕಾಂಡಕ್ಕೆ ಇಂಗ್ಲಿಷ್ ಶಬ್ದಕಾಂಡದ ಅನುವಾದ ಕೊಡುತ್ತದೆ. ವಿದೇಶಿ ಶಬ್ದದಿಂದ ಶಬ್ದಕಾಂಡವನ್ನು ಪ್ರತ್ಯೇಕಿಸಿದ ಬಳಿಕ ಉಳಿಯುವ ಪದಾಂತ್ಯಕ್ಕೆ ಪದಾಂತ್ಯಕೋಶನ್ನೂ ಅಳವಡಿಸಿರುತ್ತದೆ. ಗಣಕ ಮೆಲಿಗೆ ವಿದೇಶಿ ಭಾಷೆಯ ಶಬ್ದಕಾಂಡಕ್ಕೆ ಇಂಗ್ಲಿಷ್ ಶಬ್ದಕಾಂಡದ ಅನುವಾದ ಕೊಡುತ್ತದೆ. ವಿದೇಶಿ ಶಬ್ದದಿಂದ ಶಬ್ದಕಾಂಡವನ್ನು ಪ್ರತ್ಯೇಕಿಸಿದ ಬಳಿಕ ಉಳಿಯುವ ಪದಾಂತ್ಯಕ್ಕೆ ಪದಾಂತ್ಯಕೋಶದಲ್ಲಿ ಪರ್ಯಾಯವನ್ನು ಅರಸುತ್ತದೆ. ಇದರಲ್ಲಿ ಪೂರ್ವ ಮತ್ತು ಪರಪ್ರತ್ಯಯಗಳೂ ಇರುತ್ತವೆ. ಸರಿಯಾದ ಅನುವಾದ ಪಡೆಯಲು ಇವನ್ನು ಹಿಂದೋ ಮುಂದೋ ಸೇರಿಸಿಕೊಳ್ಳಲಾಗುತ್ತದೆ. ಉದಾಹರಣೆಗೆ amat ಎಂಬ ಲ್ಯಾಟಿನ್ ಶಬ್ದ ತೆಗೆದುಕೊಳ್ಳೊಣ. ಇದರ ಕಾಂಡ am ಅರ್ಥ Lov (ಪ್ರೇಮಿಸು); ಚಿಣ ಇದರ ಪದಾಂತ್ಯ; ಪದಾಂತ್ಯಕೋಶ ಪೂರ್ವದಲ್ಲಿ he (ಅವನು) ಎಂಬ ಶಬ್ದವಿರುವುದು; ಹಾಗೂ ಪರಪ್ರತ್ಯಯವಾಗಿ —es (-ತ್ತಾನೆ)ಯನ್ನು ಸೇರಿಸಬೇಕೆಂಬ ಸೂಚನೆ ಇರುವುದು. ಹೀಗಾಗಿ ಇದನ್ನು he Loves ಎಂದು ಗಣಕ ಭಾಷಾಂತರಿಸುತ್ತದೆ. ಈ ಪ್ರಸಂಗದಲ್ಲಿ ಸ್ತ್ರೀಲಿಂಗ ಅಥವಾ ನಪುಂಸಕಲಿಂಗ ಪೂರ್ವಶಬ್ದ (ಅಥವಾ ಕರ್ತೃಪದ) ಏಕಿರಬಾರದೆಂಬ ಪ್ರಶ್ನೆಯನ್ನು ಸದ್ಯಕ್ಕೆ ಬದಿಗಿರಿಸಬಹುದು.

	ಮುಂದಿನ ಮುಖ್ಯ ಪ್ರಶ್ನೆ ಕೋಶಶೋಧನ ತಂತ್ರಕ್ಕೆ ಸಂಬಂಧಿಸಿದ್ದು. ವಿದೇಶಿ ಭಾಷೆಯ ಅಕ್ಷರಗಳಿಗೆ ವರ್ಣಮಾಲೆಯಲ್ಲಿಯ ಅವುಗಳ ಸ್ಥಾನಾನುಗುಣವಾಗಿ ಸಂಖ್ಯೆಯನ್ನು ಪರಿಹರಿಸುವುದಕ್ಕಿಂತ ಉಲ್ಬಣಿಸುವುದೇ ಹೆಚ್ಚು ಎಂದು ಕಂಡುಬಂದದ್ದರಿಂದ ಇದನ್ನು ಕೈಬಿಡಲಾಯಿತು. ಏಕೆಂದರೆ ಶಬ್ದವೊಂದರಲ್ಲಿ ಅತಿ ಹೆಚ್ಚಿನ ಅಕ್ಷರಗಳ ಸಂಖ್ಯೆ ಹತ್ತು ಎಂದಿಟ್ಟುಕೊಂಡರೂ-ಹತ್ತೇ ಇರಬೇಕೆಂದೇನೂ ಅಲ್ಲ; ಇನ್ನೂ ಹೆಚ್ಚಾಗಿ ಇರಬಹುದು-ಶಬ್ದಸಂಗ್ರಹಕ್ಕೆ ಅಗತ್ಯವಾಗುವ ಎಡೆ 2610 ಆಗುತ್ತದೆ. ಇದು ಯಾವುದೇ ಗಣಕದಲ್ಲಿ ಕಲ್ಪಿಸಬುಹುದಾಗಿರುವ ಸ್ಧಳಾವಕಾಶಕ್ಕಿಂತ ಸುಮಾರು 102 ರಷ್ಟು ಹೆಚ್ಚಾಗುತ್ತದೆ. ಈ ಸಮಸ್ಯೆಯನ್ನು ಬಗೆಹರಿಸಲು ಮತ್ತೊಂದು ಸೂಚನೆಯನ್ನು ಮುಂದಿಡಲಾಯಿತು. ಅದರ ಸ್ವರೂಪ ಹೀಗಿದೆ. ಅಕ್ಷರ ಪ್ರಮಾಣದ ಕ್ರಮದಲ್ಲಿ (ನ್ಯೂಮರಿಕಲ್ ಮ್ಯಾಗ್ನಿಟ್ಯೂಡ್) ಜೋಡಿಸಲಾದ ಕೋಶವನ್ನು ಮೇಲಿನ ಅರ್ಥ ಮತ್ತು ಕೆಳಗಿನ ಅರ್ಧ ಎಂದು ವಿಂಗಡಿಸಲಾಗಿರುತ್ತದೆ. ದತ್ತ ಶಬ್ದದಲ್ಲಿಯ ಅಕ್ಷರಗಳ ಸಂಖ್ಯೆಯನ್ನು ಕಳೆದು ಶಬ್ದದ ಸ್ಧಾನವನ್ನು ಗೊತ್ತುಪಡಿಸಿಕೊಳ್ಳಬೇಕಾಗುತ್ತದೆ. ಉದಾಹರಣೆಗೆ 10 ಅಕ್ಷರಗಳ ಗರಿಷ್ಠ ಪರಿಮಿತಿಯ ಕೋಶದಲ್ಲಿ ಆರು ಅಕ್ಷರಗಳ ಯಾವುದೋ ಒಂದು ಶಬ್ದದ ಸ್ಧಾನ ಗೊತ್ತುಪಡಿಸಲು ಪ್ರಯತ್ನಿಸುತ್ತೇವೆ ಎಂದಿಟ್ಟುಕೊಳ್ಳೋಣ. ಮೇಲಿನ ಅರ್ಧದ ಪರಿಶೀಲನೆಯಲ್ಲಿ (ಒಂದರಿಂದ ಐದು ಅಕ್ಷರಗಳವರೆಗೆ) ಇದರ ಫಲಿತಾಂಶ ಋಣಾತ್ಮಕವೂ ಕೆಳಗಿನ ಅರ್ಧದ ಪರಿಶೀಲನೆಯಲ್ಲಿ (ಆರರಿಂದ ಹತ್ತು ಅಕ್ಷರಗಳವರೆಗೆ) ಧನಾತ್ಮಕವೂ ಆಗಿರುತ್ತವೆ. ಅಂದರೆ ಶಬ್ದದ ಸ್ಧಾನ ಗೊತ್ತುಹಚ್ಚಲು ಋಣದಿಂದ ಧನದತ್ತ ಹೊರಳುವ ಸ್ಧಳವನ್ನು ಗುರುತಿಸಿಕೊಳ್ಳಬೇಕಾಗುತ್ತದೆ. ಇದು ಶಬ್ದಕಾಂಡದ ಪ್ರದೇಶವನ್ನೂ ಸೂಚಿಸುತ್ತದೆ. ಶೂನ್ಯಬಿಂದು ಶಬ್ದದ ಎಡೆಯನ್ನು ಸೂಚಿಸುತ್ತದೆ. ಬಿರ್‍ಬೆಕ್ ಕಾಲೇಜಿನ ಅಪೆಕ್ಸ್ ಸಿ ಗಣಕದಲ್ಲಿ ಇಂಥ ಒಂದು ಕ್ರಿಯೆಗೆ ಸುಮಾರು 10 ಸೆಕೆಂಡುಗಳು ಬೇಕಾದುವು. ಆದರೆ ಮಾನವ ಭಾಷಾಂತರಕಾರ ಇದಕ್ಕಿಂತ ಬೃಹತ್ತಾದ ಕೋಶವನ್ನು ಇನ್ನೂ ಕಡಿಮೆ ಅವಧಿಯಲ್ಲಿ ಪರಿಶೀಲಿಸಬಲ್ಲ ವನಾದ್ದರಿಂದ ಕೋಶಶೋಧನದ ಈ ಅವಧಿ ತುಂಬ ಹೆಚ್ಚೇ ಆಯಿತು.

	ಕೋಶಶೋಧನ ಕಾಲ ಕಡಿಮೆ ಮಾಡುವ ದೃಷ್ಟಿಯಿಂದ ಬೂತ್ ಆವರಣ ವಿಧಾನವನ್ನು ಸೂಚಿಸಿದ. ವ್ಯವಕಲನಕ್ರಮ ಅನುಸರಿಸಿದ ಬಳಿಕ ಅನಾವಶ್ಯಕ ಪರಿಶೀಲನೆ ತಪ್ಪಿಸಿ, ಸಂಭಾವ್ಯ ಸ್ಧಳದಲ್ಲಿಯೇ ಪರ್ಯಾಯವನ್ನು ಆರಸುವಂತೆ ಈ ಪರಿಶೀಲನೆಗೆ ಒಂದು ಅವಕಾಶ ಕಲ್ಪಿಸುವ ಯೋಜನೆ ಇದರಲ್ಲಿ ಅಡಕವಾಗಿದ್ದುದರಿಂದ ಇದಕ್ಕೆ ಈ ಹೆಸರು ಕೊಟ್ಟಿದೆ.

	ಶಬ್ದಕೋಶವನ್ನು ಪರಿಚಿತ ಮತ್ತು ಅಪರಿಚಿತ ಶಬ್ದಕೋಶವೆಂಬುದಾಗಿ ವರ್ಗೀಕರಿಸಿ, ಇವನ್ನು ಮೇಲಣ ಅರ್ಥ ಮತ್ತು ಕೆಳಗಣ ಅರ್ಧ ಎಂಬುದಾಗಿ ವಿಂಗಡಿಸಿ ಪರಿಶೀಲನಾವಧಿಯನ್ನು ಮತ್ತಷ್ಟು ಕಡಿಮೆಯಾಗಿಸಬಹುದೆಂದು ಟೋಶೆರ್ ಸೂಚಿಸಿದೆ. ಆದರೆ ಇದರಿಂದ ಉಳಿತಾಯವಾಗುವ ಕಾಲ ತೀರ ಅಲ್ಪವಾಗಿದ್ದುದರಿಂದ ಈ ಸಲಹೆ ಮಾನ್ಯವಾಗಲಿಲ್ಲ.

	ಇಷ್ಟಾಗಿಯೂ ಈ ಕ್ರಮದಿಂದ ದೊರೆಯುವ ಭಾಷಾಂತರ (ಪರಸ್ಪರ ಹೋಲಿಕೆಯುಳ್ಳ ಇಂಗ್ಲಿಷ್ ಮತ್ತು ಫ್ರೆಂಚಿನಂಥ ಭಾಷೆಗಳ ವಿಷಯದಲ್ಲಿಯೂ) ತೀರಾ ಅತೃಪ್ತಿಕರವಾಗಿರುತ್ತಿತ್ತು. ಇದಕ್ಕೆ ಕಾರಣವಾಗಿದ್ದುದು ವಿವಿಧ ಭಾಷೆಗಳಲ್ಲಿಯ ಶಬ್ದಕ್ರಮದ ಭಿನ್ನತೆ. ಈ ಸಮಸ್ಯೆ ನಮ್ನನ್ನು ವ್ಯಾಕರಣ ಮತ್ತು ರಚನೆಗಳ ಸಮಸ್ಯೆಗಳ ಕ್ಷೇತ್ರದತ್ತ ಕೊಂಡೊಯ್ಯುತ್ತದೆ-ಉದಾಹರಣೆಗೆ ನಾಮಪದ ಮತ್ತು ಗುಣವಾಚಕಗಳ ಬಳಕೆಗೆ ಸಂಬಂಧಿಸಿದಂತೆ ಇಂಗ್ಲಿಷ್ ಮತ್ತು ಫ್ರೆಂಚ್ ಭಾಷೆಗಳು ಅನುಸರಿಸುವ ಶಬ್ದಕ್ರಮಗಳು ಪರಸ್ಪರ ಭಿನ್ನವಾಗಿವೆ. ಫ್ರೆಂಚ್ ಭಾಷೆಯ uಟಿe equಚಿಣioಟಿ ಜiಜಿಜಿeಡಿeಟಿಣiಚಿಟಟe ಇಂಗ್ಲಿಷಿನಲ್ಲಿ ಚಿ ಜiಜಿಜಿeಡಿeಟಿಣiಚಿಟ euqಚಿಣioಟಿ ಆಗಬೇಕೇ ಹೊರತು ಚಿಟಿ equಚಿಣioಟಿ ಜiಜಿಜಿeಡಿeಟಿಣಚಿಟ ಆಗಕೂಡದು, ಆಗುವುದಿಲ್ಲ. ಇತರ ಜಟಿಲ ವ್ಯಾಕರಣ ಪ್ರಕ್ರಿಯೆಗಳನ್ನು ತೆಗೆದುಕೊಂಡಾಗ ಈ ಸಮಸ್ಯೆ ಇನ್ನಷ್ಟು ಗಂಭೀರವಾಗುತ್ತದೆ. ಇದನ್ನು ಪರಿಹರಿಸಲು ರಚನಾಕೋಶವನ್ನು (ಡಿಕ್ಷನರಿ ಪ್ರಕ್ರಿಯಾ ಸ್ಟ್ರಕ್ಚರ್ಸ್) ಅಳವಡಿಸಬಹುದೆಂದೂ ಇಂಥ ಸಂದರ್ಭಗಳಲ್ಲಿ ವ್ಯಾಕರಣ ಪ್ರಕ್ರಿಯಾ ಸಂಬಂಧೀ ಸೂಚನೆಗಳನ್ನು ಕೊಡಬಹುದೆಂದೂ ಹೇಳಲಾಗಿದೆ. ಫ್ರೆಂಚಿನಂಥ ಭಾಷೆಯಲ್ಲಿ ರಚನಾಪ್ರಕಾರಗಳ ಸಂಖ್ಯೆ ಸೀಮಿತವಾಗಿರುವುದರಿಂದ ಇದು ಅಂಥ ಸಮಸ್ಯೆ ಆಗಲಾರದೇನೋ. ಆದರೆ ಜರ್ಮನ್ನಿನಂಥ ಭಾಷೆಯನ್ನು ತೆಗೆದುಕೊಂಡಾಗ ಈ ಸಮಸ್ಯೆ ದುರ್ಲಂಘ್ಯವೇ ಆಗುತ್ತದೆ. ಸದ್ಯದಲ್ಲಿ ಲಭ್ಯವಾಗಿರುವ ಹಾಗೂ ನಿಕಟ ಭವಿಷ್ಯದಲ್ಲಿ ರೂಪಿಸಬಹುದಾಗಿರುವ ಗಣಕಗಳಿಗೆ, ಈ ಕಾರಣದಿಂದಾಗಿ ಸೀಮಿತ ಸಂಖ್ಯೆಯ ರಚನೆಗಳನ್ನು ಮಾತ್ರ ಭಾಷಾಂತರಿಸಲು ಸಾಧ್ಯವಾಗಬಹುದೆಂದೂ ಭಾಷಾಸಂಬಂಧವಾದ ಮತ್ತಷ್ಟು ಸಮರ್ಪಕ ವಿಶ್ಲೇಷಣೆ ಲಭ್ಯವಾಗುವ ತನಕ ಬೇರೆ ದಾರಿಯಿಲ್ಲವೆಂದೂ ಗಣಕಗಳ ಸಂಗ್ರಹಣಾಂಗಗಳ ಸ್ವರೂಪದಲ್ಲಿ ಕ್ರಾಂತಿಕಾರಕ ಬದಲಾವಣೆ ಆಗುವತನಕ ವಿಷಯನಿಷ್ಠ ಕೋಶಗಳನ್ನು ಉಪಯೋಗಿಸಬೇಕಾದೀತೆಂದೂ ಹೇಳಲಾಗಿದೆ.
	ಆದರೆ ರಚನಾಸಂಬಂಧ ಸಮಸ್ಯೆಗಳಿಗೆ ಬೇರೋಂದು ಪರಿಹಾರ ಲಭ್ಯವಾಗಿದೆ. ಭಾಷಾ ವಿಜ್ಞಾನದ ಕ್ಷೇತ್ರದಲ್ಲಿ ನೋಆಮ್ ಜೋಮ್‍ಸ್ಕಿಯ ವಿಶ್ಲೇಷಣವಿಧಾನ ಉಂಟುಮಾಡಿದ ಕ್ರಾಂತಿಕಾರಕ ಪರಿಣಾಮ ಯಂತ್ರಾನುವಾದದ ಕ್ಷೇತ್ರಕ್ಕೆ ವರವಾಗಿ ಪರಿಣಮಿಸಿತು. ಚೋಮ್‍ಸ್ಕಿಯ ವಿಶ್ಲೇಷಣೆಯಿಂದ ಇನ್ನೂ ಒಂದು ಹೆಚ್ಚೆ ಮುಂದೆ ಹೋಗಿ ವಾಕ್ಯರಚನೆಯನ್ನು ಆವರಣವಿಧಾನದ ಮೂಲಕ ವಿಶ್ಲೇಶಿಸಿಕೊಟ್ಟರೆ ಯಾವುದೇ ಬಗೆಯ ಜಟಿಲ ವಾಕ್ಯರಚನೆಯನ್ನೂ ಭಾಷಾಂತರಿಸಲು ಸಾಧ್ಯವಾದೀತೆಂಬುದನ್ನು ಪಿ.ಸಿ. ಗಣೇಶ ಸುಂದರಮ್ ಅವರ ನೇತೃತ್ವದ ಭಾಷಾವಿಜ್ಞಾನಿಗಳ ತಂಡ ತೋರಿಸಿಕೊಟ್ಟಿದೆ. ಮಾನವಮತಿಗೆ ಸುಲಭವಾಗಿ ಗೋಚರಿಸಬಹುದಾದ ಅದೂ ತಿಣುಕಬೇಕಾದಂಥ ಜಾಣ್ಮೆಯ ರಚನೆಗಳು, ಈ ಆವರಣಾವಿಧಾನಕ್ಕೆ ಸಮಸ್ಯೆಯಾಗುವುದಿಲ್ಲವೆಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಈ ವಿಧಾನದಲ್ಲಿ ಕ್ರಿಯಾಪದವೊಂದನ್ನು ಬಿಟ್ಟು ಉಳಿದ ಎಲ್ಲ ವ್ಯಾಕರಣಪ್ರಕ್ರಿಯೆಗಳೂ ಅನ್ವಯಾನುಗುಣವಾಗಿ ವಿವಿಧ ಬಗೆಯ ಆವರಣಗಳಲ್ಲಿ ಅಳವಟ್ಟಿರುತ್ತವೆ. ಹೀಗಾಗಿ ಗಣಕಕ್ಕೆ ರಚನಾ ವೈಶಿಷ್ಟ್ಯಗಳನ್ನು ಗುರುತಿಸುವುದು ಕಷ್ಟವಾಗದು. ಉದಾಹರಣೆಗೆ ಈ ಕೆಲವು ವಾಕ್ಯಗಳನ್ನು ಪರಿಶೀಲಿಸಬಹುದು. They are flying planes. ಇದಕ್ಕೆ 'ಅವರು ವಿಮಾನಗಳನ್ನು ಹಾರಿಸುತ್ತಿದ್ದಾರೆ ಅಥವಾ 'ಅವು ಹಾರುವ ವಿಮಾನಗಳು ಎಂದು ಅರ್ಥವಾಗಬಹುದಷ್ಟೆ. ಇದನ್ನು ಆಡುಮಾತಿನಲ್ಲಿ ಉಚ್ಚಾರಣಾ ವ್ಯತ್ಯಾಸದಿಂದ ತೋರಿಸುತ್ತೇವೆ. ಗಣಕಕ್ಕೆ ಇದನ್ನು ಆವರಣಗಳ ಬಳಕೆಯಿಂದ ಸೂಚಿಸಬೇಕಾಗುತ್ತದೆ. [(They) are (flying planes) ಮತ್ತು [(They) are flying (planes)]. ಇದೇ ರೀತಿ Flying planes can be dangerous]-(ಹಾರುವ ವಿಮಾನಗಳು ಅಪಾಯಕಾರಿಯಾಗಿರಬಹುದು) ಹಾಗೂ [(Flying planes) can be (dangerous)]- (ವಿಮಾನಗಳನ್ನು ಹಾರಿಸುವುದು ಅಪಾಯಕಾರಿಯಾಗಿರಬಹುದು). ಹೀಗಾಗಿ ಬಲುದೊಡ್ಡ ಸಮಸ್ಯೆಯೊಂದನ್ನು ಆವರಣವಿಧಾನದಿಂದ ಬಗೆಹರಿಸಿದಂತಾಗಿದೆ.
ಕೊನೆಯದಾಗಿ ಸಂದಿಗ್ಧತೆಗಳ ಮತ್ತು ನುಡಿಗಟ್ಟುಗಳ ಸಂದರ್ಭದಲ್ಲಿ ಗಣಕ ಎದುರಿಸಬೇಕಾಗಿ ಬರುವ ಸಮಸ್ಯೆಗಳನ್ನು ಪರಿಶೀಲಿಸಬಹುದು. ಸಂದಿಗ್ಧತೆ ಅರ್ಥಕ್ಕೆ ಸಂಬಂಧಿಸಿದ ವಿಷಯ. ಇದು ಹಲವು ಬಗೆಯಾಗಿರಬಹುದು: (i) ವಿಷಯಾನುಗುಣವಾಗಿ ಅರ್ಥ ಬದಲಾಗುವುದು; (ii) ಇತರ ಶಬ್ಧಗಳೊಡನೆ ಜೊತೆಗೂಡಿದಾಗ ಅರ್ಥ ಬದಲಾಗುತ್ತ ಬರುವುದು ; ಮತ್ತು (iii) ಸಂದರ್ಭಾನುಗುಣವಾಗಿ ಅರ್ಥ ಬೇರೆಯಾಗುವುದು. 

	ಮೊದಲನೆಯ ಬಗೆಯ ಸಂದಿಗ್ಧತೆ ಒಂದು ರೀತಿಯಲ್ಲಿ ಸರಳವಾದುದು. ಏಕೆಂದರೆ ಇದು ಪಾರಿಭಾಷಿಕ ಶಬ್ದಗಳಿಗೆ ಸಂಬಂಧಿಸಿದ್ದು. ಇವು ಆಯಾ ವಿಜ್ಞಾನ ಅಥವಾ ಶಾಸ್ತ್ರಶಾಖೆಗಳಲ್ಲಿ ವಿಶಿಷ್ಟ ಅರ್ಥ ಹೊಂದಿರುತ್ತವೆಂಬುದೇ ಇಲ್ಲಿಯ ಸಮಸ್ಯೆಯ ಮೂಲ. ಈ ಸಂದಿಗ್ಧತೆಯನ್ನು ಬೂತ್ ಮತ್ತು ರಿಚೆನ್ಸ್ ಗಮನಿಸಿಯೇ ಇದ್ದರು. ಇಂಥ ಸಂದರ್ಭಗಳಲ್ಲಿ ಎರಡು ರೀತಿಗಳಲ್ಲಿ ಪರಿಹಾರ ಕಂಡುಕೊಳ್ಳುವುದು ಸಾಧ್ಯ: ಒಂದು, ಗಣಕದ ಮೂಲಕ ಎಲ್ಲ ಅರ್ಥಗಳನ್ನೂ ಒದಗಿಸಿ ಯುಕ್ತ ಅರ್ಥ ಆಯ್ದಕೊಳ್ಳುವ ಹೊಣೆಯನ್ನು ಓದುಗನಿಗೇ ಬಿಡುವುದು; ಎರಡು, ವಿಷಯನಿಷ್ಠ ಶಬ್ಧಕೋಶಗಳನ್ನು ಬಳಸುವುದರ ಮೂಲಕ ಈ ಸಮಸ್ಯೆಯನ್ನು ಮೂಲದಲ್ಲಿಯೇ ಪರಿಹರಿಸುವುದು. ಅಂದರೆ ವಿಷಯ ಗೊತ್ತಿದ್ದಾಗ ಎರಡನೆಯ ಕ್ರಮ ಅನುಸರಿಸಬಹುದು. ವಿಷಯ ಗ್ತೊತಿಲ್ಲದೆ ಇದ್ದಾಗ ಪೂರ್ವಭಾವಿ ವಿಶ್ಲೇಷಣೆ ಅಗತ್ಯವಾಗುತ್ತದೆ. ಈ ಸಮಸ್ಯೆಯನ್ನು ಬಗೆಹರಿಸಲು ಸಂದರ್ಭಾಂಕನ ವಿಧಾನ ಎಂಬ ಇನ್ನೊಂದು ವಿಧಾನವನ್ನು ಸೂಚಿಸಲಾಗಿದೆ. ಉದಾಹರಣೆಗೆ noyau ಶಬ್ಧಕ್ಕೆ nut (1)nucleus (2),centre(3) ಮತ್ತು kernel (4) ಎಂಬ ವಿವಿಧಾರ್ಥಗಳು ಸಂಗತವಾಗುವಂತಿದ್ದರೆ ಯಾವ ಸಂದರ್ಭಗಳಲ್ಲಿ ಈ ಅರ್ಥಗಳು ಸಂಗತವಾಗುತ್ತವೆ ಎಂಬುದನ್ನು ಕಂಡು ಕೊಳ್ಳಬೇಕು. ಉದಾಹರಣೆಗೆ ಸಮಾಜಶಾಸ್ತ್ರೀಯ ಸಂದಭದಲ್ಲಿ centre ಎಂಬ ಅರ್ಥ ಮಾತ್ರ ಸಂಗತವಾಗುತ್ತದೆಂದು ಇಟ್ಟುಕೊಳ್ಳೋಣ. ಯಂತ್ರಕ್ಕೆ ಮೂರನೆಯ ಅರ್ಥ ಸಂಗತವಾಗಿದೆ ಎಂಬ ಸೂಚನೆ ಕೊಟ್ಟಿದ್ದರೆ ಅದು ಈ ಸೂಚನೆಗೆ ಅನುಗುಣವಾಗಿ, ಉಳಿದ ಅರ್ಥಗಳನ್ನೂ ತಿರಸ್ಕರಿಸಿ, ಸಂಗತ ಅರ್ಥವನ್ನೇ ಆಯ್ದುಕೊಳ್ಳುತ್ತದೆ. 

	ಎರಡನೆಯ ಬಗೆಯ ಸಂದಿಗ್ಧತೆ ಶಬ್ಧಗಳು ನುಡಿಗಟ್ಟಾಗಿ ಪರಿಣಮಿಸಿ ಅರ್ಥ ವ್ಯತ್ಯಾಸ ಹೊಂದುವುದಕ್ಕೆ ಸಂಬಂಧಿಸಿರುವುದು. ಇದಕ್ಕೆ ಒಂದು ಪರಿಹಾರವಾಗಿ ರಚನಾಕೋಶವನ್ನು ಬಳಸಬಹುದು. ಕೋಶದಲ್ಲಿಯ ರಚನಾಂಕದ (ಸ್ಟ್ರಕ್ಚರಲ್ ನಂಬರ್) ಬಗ್ಗೆ ಗಣಕಕ್ಕೆ ಸೂಚನೆಕೊಟ್ಟರೆ ಆಯಿತು. ಉದಾಹರಣೆಗೆ boite de nuit ಎಂಬ ನುಡಿಗಟ್ಟಿನ ಶಬ್ದಶಃ ಅರ್ಥ  box of night ಎಂದಾಗುತ್ತದೆ. ಆದರೆ ನುಡಿಗಟ್ಟಾಗಿ ಪ್ರಯೋಗವಾದಾಗ ಇದರ ಅರ್ಥ night club. ಇಂಥ ಸಂದರ್ಭದಲ್ಲಿ ಗಣಕಕ್ಕೆ ಕೊಡುವ ಸೂಚನೆಗಳು ಹೀಗಿರುತ್ತವೆ: (i) boite ಶಬ್ದ ಬಂದಾಗ ಅದನ್ನು ಕೂಡಲೇ ಭಾಷಾಂತರಿಸಕೂಡದು, (ii) ಮುಂದಿನ ಶಬ್ದನೋಡಿ ಭಾಷಾಂತರಿಸಬೇಕು ; (iii)ಮುಂದಿನ ಶಬ್ಧ ಕಾರಕವೋ ಪ್ರತ್ಯಯವೋ ಆಗಿದ್ದರೆ ಅದನ್ನೂ ಭಾಷಾಂತರಿಸದೆ ಮೂರನೆಯ ಶಬ್ದವನ್ನು ಭಾಷಾಂತರಿಸಬೇಕು. ಈ ಶಬ್ದ nuit ಆಗಿದ್ದರೆ night club ಎಂದೂ chocolat ಆಗಿದ್ದರೆ box of chocolate ಎಂದೂ ಭಾಷಾಂತರಿಸಬೇಕು. ಮೊದಲ ನೋಟಕ್ಕೆ ಇದು ಸುಲಭವೆಂದು ತೋರಬಹುದಾದರೂ ಭಾಷೆಯಲ್ಲಿ ಇಂಥ ನುಡಿಗಟ್ಟುಗಳ ಸಂಖ್ಯೆ ಅಪಾರವಾಗಿರುವುದರಿಂದ ಇದು ಬಲುಮಟ್ಟಿಗೆ ದುರ್ಲಂಘ್ಯ ಸಮಸ್ಯೆಯೇ ಆಗಿ ಉಳಿಯುತ್ತದೆ. ವ್ಶೆಜ್ಞಾನಿಕ ಮತ್ತು ತಾಂತ್ರಿಕ ಬರೆಹಗಳಲ್ಲಿ ಇಂಥ ನುಡಿಗಟ್ಟುಗಳ ಸಂಖ್ಯೆ ಸೀಮಿತವಾಗಿರುತ್ತದೆಂಬುದಷ್ಟೇ ಇದಕ್ಕಿರುವ ಸಮಾಧಾನ. 

	ಮೂರನೆಯ ಬಗೆಯ ಸಂದಿಗ್ಧತೆಯಂತೂ ಅತಿ ಸಂಕೀರ್ಣವಾದುದು. ಉದಾಹರಣೆಗೆ she cannot bear children  ಎಂಬ ವಾಕ್ಯದಲ್ಲಿ bear ಶಬ್ದಕ್ಕೆ ಇರುವ ಅರ್ಥವೇ ಬೇರೆ ಎಂಬುದನ್ನು ಮಾನವಮತಿ ಗ್ರಹಿಸಬಲ್ಲದು ಆದರೆ ಗಣಕ ಇಷ್ಟು ಲೀಲಾಜಾಲವಾಗಿ ಈ ಕಾರ್ಯವನ್ನು ಮಾಡಲಾರದು. ಹೀಗಾಗಿ ಇಲ್ಲಿ bear ಶಬ್ದಕ್ಕೆ ಪ್ರಸವಶಾಸ್ತ್ರ ಸಂಬಂಧ ಅರ್ಥವಿದೆ ಎಂದು ಗಣಕಕ್ಕೆ ಸೂಚನೆ ಕೊಡುವುದು ಅಗತ್ಯವಾಗುತ್ತದೆ. ಇಲ್ಲವಾದಲ್ಲಿ ತಪ್ಪು-ಕೆಲವೊಮ್ಮೆ ಮನೋರಂಜಕವಾದ- ಅರ್ಥಗಳು ಅನುವಾದದಲ್ಲಿ ಕಾಣಿಸಿಕೊಳ್ಳುತ್ತವೆ. ಇಂಥ ಕೆಲವು ಉದಾಹರಣೆಗಳು ತುಂಬ ಪ್ರಸಿದ್ದವಾಗಿವೆ: 
ಮೂಲ	:	The spirit is willing but the flesh is werk.
ಯಂತ್ರಾನುವಾದ	:	The whisky is agreeable but the meat had gone bad. 
ಮೂಲ	:	Hydraulic ram
ಯಂತ್ರಾನುವಾದ	:	Aquatic male sheep
ಮೂಲ	:	Out of sight, out of mind 
ಯಂತ್ರಾನುವಾದ	:	(nvisible, imbecile¸

	ಇಂಥ ಸಂಭವಗಳಿಗೆ ಎಡೆಗೊಡಬಾರದೆಂಬ ದೃಷ್ಟಿಯಿಂದಲೇ ರೈಫ್ಲರ್ ಯಂತ್ರಾನುವಾದಕ್ಕೆ ಒಬ್ಬ ಪೂರ್ವಸಂಪಾದಕ (ಪ್ರೀ ಎಡಿಟರ್) ಮತ್ತು ಒಬ್ಬ ಉತ್ತರಸಂಪಾದಕ (ಪೋಸ್ಟ್ ಎಡಿಟರ್) ಇರಬೇಕಾದುದು ಅಗತ್ಯವೆಂದು ಸೂಚಿಸಿದ್ದ. ಸಂದಿಗ್ಧತೆಗಳಿಗೆ ಎಡೆ ದೊರೆಯುವಂಥ ಸಂಭವಗಳನ್ನು ದೂರಮಾಡುವುದು-ಅಂದರೆ ಈ ದೃಷ್ಟಿಯಿಂದ ಮೂಲವನ್ನು ಪರಿಷ್ಕರಿಸುವುದು ಅಥವಾ ಸಂಪಾದಿಸುವುದು-ಪೂರ್ವಸಂಪಾದಕನ ಕಾರ್ಯ. ಇದಕ್ಕೆ ಮೂಲಭಾಷೆಯ ಅರಿವಿರುವ ವ್ಯಕ್ತಿ ಸಾಕು. ಈತನಿಗೆ ಉದ್ದಿಷ್ಟ ಭಾಷೆ ತಿಳಿದಿರಬೇಕಾದ ಅಗತ್ಯವಿಲ್ಲ. ಗಣಕ ಒದಗಿಸಿದ ಭಾಷಾಂತರದಲ್ಲಿಯ ಸಂದಿಗ್ಧತೆಗಳನ್ನು ದೂರಮಾಡುವುದು ಉತ್ತರಸಂಪಾದಕನ ಹೊಣೆ. ಈ ದೃಷ್ಟಿಯಿಂದ ಈತನಿಗೆ ಮೂಲ ಮತ್ತು ಉದ್ದಿಷ್ಟ ಭಾಷೆಗಳ ಬಗೆಗಿನ ಪರಿಜ್ಞಾನ ಅಗತ್ಯ. ಯುಕ್ತ ಸೂಚನೆಗಳನ್ನು ಅಳವಡಿಸಿದರೆ, ಪೂರ್ವ ಅಥವಾ ಉತ್ತರಸಂಪಾದಕನ ಅಗತ್ಯ ಅಷ್ಟಾಗಿ ಇಲ್ಲದಂತಾಗುತ್ತದೆಂಬುದು ಇಂದು ಈ ಕ್ಷೇತ್ರದಲ್ಲಿ ಮೂಡಿರುವ ಭಾವನೆಯಾದರೂ ಅನುವಾದದ ಸಮರ್ಪಕತೆಯ ದೃಷ್ಟಿಯಿಂದ ಕನಿಷ್ಠ ಪಕ್ಷ ಪೂರ್ವಸಂಪಾದಕನಾದರೂ ಇರಲೇಬೇಕು. ಅಂಥವನೊಬ್ಬನಿದ್ದಲ್ಲಿ ಅನುವಾದದ ಅನೇಕ ಅನಾಹುತಗಳನ್ನು ತಪ್ಪಿಸಬಹುದೆಂದು ಹೇಳಲಾಗಿದೆ. 

	ಒಟ್ಟಿನಲ್ಲಿ ಯಂತ್ರಾನುವಾದ ಅನೇಕ ಸಮಸ್ಯೆಗಳಿಂದ ಇಡಿಕಿರಿದಿರುವ ಕ್ಷೇತ್ರವಾಗಿದ್ದು ಗಣಕಗಳು ಸ್ವತಂತ್ರವಾಗಿಯೇ ಕಾರ್ಯನಿರ್ವಹಿಸಿ ಸಮರ್ಪಕವಾದ ಅನುವಾದವನ್ನು ಒದಗಿಸುವ ದಿನಗಳು ಇನ್ನೂ ದೂರವಾಗಿಯೇ ಇವೆ.    
  	(ಪಿ.ಜಿ.ಡಿ.)-

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ